ನವದೆಹಲಿ : ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಶುಭ ಸುದ್ದಿ. ಕೊರೊನಾ ವೈರಸ್ ಭೀತಿ ನಡುವೆಯೂ ಸೆಪ್ಟೆಂಬರ್ 25ರಿಂದ ನವೆಂಬರ್ 1ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಆವೃತ್ತಿಯನ್ನು ಆಯೋಜಿಸುವ ಕಡೆಗೆ ಬಿಸಿಸಿಐ ಚಿಂತನೆ ನಡೆಸಿದೆ..
ಅಂದಹಾಗೆ ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಕೋವಿಡ್-19 ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಮುಂದಿನ ಆದೇಶದ ವರೆಗೆ ರದ್ದು ಪಡಿಸಲಾಗಿತ್ತು. ಇದೀಗ ನವೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ರದ್ದಾಗು ಎಲ್ಲಾ ಸಾಧ್ಯತೆ ಇರುವುದರಿಂದ ಆ ಅವಧಿಯಲ್ಲಿ ಐಪಿಎಲ್ ಆಯೋಜನೆಗೆ ಬಿಸಿಸಿಐ ಕಸರತ್ತು ನಡೆಸುತ್ತಿದೆ.
ಈ ಬಗ್ಗೆ ಐಎಎನ್ಎಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಬಿಸಿಸಿಐನ ಮೂಲಗಳು ಟೂರ್ನಿ ಆಯೋಜನೆಗೆ ಸೆಪ್ಟೆಂಬರ್ ಅಂತ್ಯದಿಂದ ನವೆಂಬರ್ ಆರಂಭದ ದಿನಗಳ ಅವಧಿಯನ್ನು ಎದುರು ನೋಡಲಾಗುತ್ತಿದೆ ಎಂದು ಹೇಳಿವೆ. ಅಂದಹಾಗೆ ಈ ವರ್ಷ ಐಪಿಎಲ್ ನಡೆಯದೇ ಇದ್ದರೆ ಬಿಸಿಸಿಐ ಬರೋಬ್ಬರಿ 4 ಸಾವಿರ ಕೋಟಿ ರೂ.ಗಳ ಭಾರಿ ನಷ್ಟ ಅನುಭವಿಸಲಿದೆ ಎಂದು ಈ ಮೊದಲು ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದರು.
“ಇದನ್ನು ಈಗಲೇ ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಇದಕ್ಕೂ ಮೊದಲು ಹಲವು ಸಂಗತಿಗಳು ಸ್ಪಷ್ಟವಾಗಬೇಕಿದೆ. ಆದರೆ ಸೆಪ್ಟೆಂಬರ್ 25ರಿಂದ ನವೆಂಬರ್ 1ರ ಒಳಗೆ ಟೂರ್ನಿ ಆಯೋಜಿಸಲು ಬಿಸಿಸಿಐ ಎದುರು ನೋಡುತ್ತಿರುವುದಂತೂ ಖಂಡಿತ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾದರೆ ಭಾರತ ಸರಕಾರ ಟೂರ್ನಿ ಆಯೋಜನೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ಈ ಮೊದಲೇ ಹೇಳಿದಂತೆ ಹಲವು ಸಂಗತಿಗಳು ಮೊದಲು ಸ್ಪಷ್ಟವಾಗಬೇಕಿದೆ,” ಎಂದು ಬಿಸಿಸಿಐ ಮೂಲಗಳು ಹೇಳಿವೆ.
“ಈ ದಿನಾಂಖವನ್ನು ಗಮನದಲ್ಲಿರಿಸಿ ಯೋಜನೆ ರೂಪಿಸುವಂತೆ ನಮಗೆ ಸೂಚಿಸಲಾಗಿದೆ. ಆದರೆ ಎಲ್ಲದಕ್ಕೂ ಮೊದಲು ದೇಶದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಇಲ್ಲಿ ಮುಖ್ಯವಾಗುತ್ತದೆ. ಸರಕಾರ ಅದ್ಭುತ ಕೆಲಸ ಮಾಡುತ್ತಿದ್ದು ಶೀಘ್ರದಲ್ಲೇ ಸೋಂಕಿನ ಸಂಖ್ಯೆ ಕಡಿಮೆಯಾಗಲಿದೆ ಎಂಬ ಆಶಾಭಾವದಲ್ಲಿ ನಾವಿದ್ದೇವೆ,” ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.”ಈಗಲೇ ಹೇಳಲು ಸಾಧ್ಯವಿಲ್ಲ. ಆಗಸ್ಟ್ ಹೊತ್ತಿಗೆ ಕೊಂಚ ಸ್ಪಷ್ಟ ಚಿತ್ರಣ ಸಿಗಲಿದೆ. ಎಲ್ಲವೂ ಸಾಧ್ಯವಾಗುವ ಸ್ಥಿತಿ ತಲುಪಿದರೆ ಸೆಪ್ಟೆಂಬರ್ ಅಂತ್ಯಕ್ಕೆ ಮೊದಲ ಪಂದ್ಯ ನಡೆಯಲಿದೆ,” ಎಂದಿದ್ದಾರೆ.ಎಲ್ಲಕ್ಕಿಂತಲೂ ಮೊದಲು ನವೆಂಬರ್-ಅಕ್ಟೋಬರ್ ಅವಧಿಯಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿ ರದ್ದಾಗಬೇಕು. ಬಳಿಕವಷ್ಟೇ ಐಪಿಎಲ್ 2020 ಆಯೋಜನೆ ಸಾಧ್ಯವಾಗಲಿದೆ. ಆಸ್ಟ್ರೇಲಿಯಾ ಸರಕಾರ ಈಗಾಗಲೇ ನಿಗದಿತ ಅವಧಿಯಲ್ಲಿ ವಿಶ್ವಕಪ್ ಆಯೋಜನೆ ಸಾಧ್ಯವಿಲ್ಲ ಎಂದೇ ಹೇಳಿಕೊಂಡು ಬಂದಿದೆ. ಆದರೆ, ಐಸಿಸಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.
Follow us on Social media