ಸುಳ್ಯ: ತೋಟದಲ್ಲಿರುವ ಗೋದಾಮಿನಿಂದ ಕಾಳು ಮೆಣಸು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಸುಳ್ಯದ ಕೊಳ್ತಿಗೆ ಗ್ರಾಮದ ಕುದ್ಕುಳಿ ಎಂಬಲ್ಲಿರುವ ಮಹಮ್ಮದ್ ಶಾಫಿ ಎಂಬವರ ಮನೆಯಲ್ಲಿ ನಡೆದಿದೆ.
ಆರೋಪಿಗಳಿಂದ 1,18,750 ರೂ. ಮೌಲ್ಯದ 10 ಗೋಣಿ ಕಾಳು ಮೆಣಸು ಮತ್ತು ಒಂದು ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.ಜಾಲ್ಸೂರು ಗ್ರಾಮದ ಕಳಂಜಿ ಮನೆಯ ಮಂಜು, ಸುಳ್ಯ ಗ್ರಾಮ ಕೊಡಿಯಭೈಲು ಮನೆಯ ಪ್ರವೀಣ, ಜಾಲ್ಸೂರು ಗ್ರಾಮ ಬರ್ಪೆಡ್ಕ್ ಮನೆಯ ಪವನ್ ಕುಮಾರ್ ಮತ್ತು ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮ ನೀಟಡ್ಕ ಮನೆಯ ಅಬ್ದುಲ್ ಬಾಶೀತ್ ಬಂಧಿತ ಅರೋಪಿಗಳು.
ಕಳೆದ ಜೂನ್ 15 ರಿಂದ ಜುಲೈ 3 ರ ಮಧ್ಯೆ ಆದಂ ಕುಂಞಿ ಅವರು ಕೆಲಸ ಮಾಡುತ್ತಿದ್ದ ಕೊಳ್ತಿಗೆ ಗ್ರಾಮದ ಕುದ್ಕುಳಿ ಎಂಬಲ್ಲಿರುವ ಮಹಮ್ಮದ್ ಶಾಫಿ ಎಂಬವರ ತೋಟದಲ್ಲಿರುವ ಗೋದಾಮಿನಿಂದ 10 ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ 1,18,750 ರೂಪಾಯಿ ಮೌಲ್ಯದ 250 ಕೆ.ಜಿ ಕಾಳು ಮೆಣಸು ಕಳವಾಗಿತ್ತು.
ಈ ಸಂಬಂಧ ಆದಂ ಕುಂಞಿ ಅವರು ನೀಡಿದ ದೂರಿನಂತೆ ಜುಲೈ 3 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಬೆಳ್ಳಾರೆ ಠಾಣಾ ಪೊಲೀಸ್ ಉಪನಿರೀಕ್ಷಕ ನವೀನ್ಚಂದ್ರ ಜೋಗಿ ಅವರು ಶಂಕಿತ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 4 ರಂದು ಜಾಲ್ಸೂರು ಸಮೀಪದ ಅಡ್ಕಾರ್ ಕಡೆಯಿಂದ ಸುಳ್ಯ ಕಡೆಗೆ ಸಂಚರಿಸುತ್ತಿದ್ದ ಕೇರಳದ ನೋಂದಣಿ ನಂಬ್ರ ಹೊಂದಿದ ಕಾರಿನಲ್ಲಿ ಅರೋಪಿಗಳು ಸಂಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ದಸ್ತಗಿರಿ ಮಾಡಿದರು.
ಕಳವು ಮಾಡಿದ್ದ ಕಾಳು ಮೆಣಸನ್ನು ಆರೋಪಿ ಪವನ್ ಕುಮಾರನ ಮನೆಯಲ್ಲಿ ಬಚ್ಚಿಡಲಾಗಿತ್ತು. ಒಟ್ಟು 118750 ರೂ. ಬೆಲೆ ಬಾಳುವ 10 ಗೋಣಿ ಕಾಳು ಮೆಣಸು ಹಾಗೂ ಕಾಳು ಮೆಣಸು ಸಾಗಿಸಲು ಉಪಯೋಗಿಸಿದ ಕಾರನ್ನು ಸ್ವಾಧೀನ ಪೊಲೀಸರು ಪಡಿಸಿದ್ದಾರೆ.
ಈ ಪ್ರಕರಣದ ಕೃತ್ಯದಲ್ಲಿ ಇನ್ನೊಬ್ಬ ಅಪ್ರಾಪ್ತ ಬಾಲಕನು ಭಾಗಿಯಾಗಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
Follow us on Social media