ಮಂಗಳೂರು : ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ತಪಾಸಣೆಗೆ ತೆರಳಿದ್ದ ಮಹಿಳೆಯರು ಬಟ್ಟೆ ಬದಲಿಸುವಾಗ ಮೊಬೈಲ್ ಕ್ಯಾಮೆರಾವನ್ನು ಗುಪ್ತ ಸ್ಥಳದಲ್ಲಿ ಇರಿಸಿ ವೀಡಿಯೊ ಸೆರೆ ಹಿಡಿಯುತ್ತಿದ್ದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
- ಬಂಧಿತನನ್ನು ಅದೇ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸ ನಿರ್ವಹಿಸುತ್ತಿದ್ದ ಕಲಬುರಗಿ ಮೂಲದ ಸದ್ಯ ಬಜ್ಪೆಯಲ್ಲಿ ವಾಸವಾಗಿದ್ದ ನರ್ಸಿಂಗ್ ವಿಭಾಗದ ವಿದ್ಯಾರ್ಥಿ ಪವನ್ ಕುಮಾರ್ (21) ಎಂದು ಗುರುತಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಯುವತಿಯೊಬ್ಬರು ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಆಕೆಗೆ ಸ್ಕ್ಯಾನಿಂಗ್ ಇದ್ದ ಕಾರಣ ಕೋಣೆಯೊಂದರಲ್ಲಿ ಬಟ್ಟೆ ಬದಲಾಯಿಸಲು ಸಿಬ್ಬಂದಿ ತಿಳಿಸಿದ್ದಾರೆ. ಅದರಂತೆ ಯುವತಿ ಬಟ್ಟೆ ಬದಲಾಯಿಸುವ ಮುನ್ನ ಕೋಣೆಯನ್ನು ತಪಾಸಣೆ ನಡೆಸಿದಾಗ ಗುಪ್ತವಾಗಿ ಕ್ಯಾಮೆರಾ ಇರಿಸಿ ಚಿತ್ರೀಕರಿಸುವುದು ಬೆಳಕಿಗೆ ಬಂದಿದೆ.ಈ ವಿಚಾರವನ್ನು ಯುವತಿ ತಕ್ಷಣ ವೈದ್ಯರ ಗಮನಕ್ಕೆ ತಂದಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ವಿಚಾರಣೆ ನಡೆಸಿದಾಗ ಅದೇ ಆಸ್ಪತ್ರೆಯ ನರ್ಸಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ಎಂಬಾತ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.