ಬೆಂಗಳೂರು: ಸೇವೆಗಳನ್ನು ಸ್ಥಗಿತಗೊಳಿಸಿ ಕಳೆದ 10 ದಿನಗಳಿಂದ ಧರಣಿ ನಡೆಸುತ್ತಿದ್ದರೂ, ಯಾವುದೇ ಸ್ಪಂದನೆಗಳನ್ನು ನೀಡದೆ ಮೊಂಡುತನ ಪ್ರದರ್ಶಿಸುತ್ತಿರುವ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ತೀವ್ರವಾಗಿ ಕಿಡಿಕಾರಿದ್ದು, ಬೇಡಿಕೆ ಈಡೇರದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
ರೂ.12 ಸಾವಿರ ಗೌರವಧನ ಮತ್ತು ಕೊರೋನಾ ಹೋರಾಟದಲ್ಲಿ ರಕ್ಷಣೆಗೆ ಆಗತ್ಯ ಸುರಕ್ಷಾ ಪರಿಕರಗಳನ್ನು ನೀಡಬೇಕೆಂಬುದಷ್ಟೇ ನಮ್ಮ ಬೇಡಿಕೆಯಾಗಿದೆ. ಆಧರೆ, ಸರ್ಕಾರ ಜನವಿರೋಧಿ ನೀತಿಯಿಂದ ನಮ್ಮನ್ನು ಈವರೆಗೂ ಚರ್ಚೆಗೆ ಕರೆದಿಲ್ಲ. ಸೇವೆ ನಿಲ್ಲಿಸಿ ಜೂ.30ರಿಂದ ಸರ್ಕಾರಕ್ಕೆ 10 ದಿನ ಕಾಲಾವಕಾಶ ನೀಡಲಾಗಿತ್ತು. ಆದರೆ, ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಸರ್ಕಾರದ ಪ್ರತಿಕ್ರಿಯೆ ಹೀಗೆಯೇ ಇದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕರ್ನಾಟಕ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀಯವರು ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರ ಸಂಘಟನೆಯ ಅಧ್ಯಕ್ಷ ಸೋಮಶೇಖರ್ ಯಾದಗಿರಿಯವರು ಮಾತನಾಡಿ, ಸರ್ಕಾರ ಈ ಹಿಂದೆ ಭರವಸೆ ನೀಡಿದ್ದ ರೂ.3000 ಒನ್ ಟೈಮ್ ಪ್ಯಾಕೇಜ್ ಇನ್ನೂ ಸಿಕ್ಕಿಲ್ಲ. ಕಾರ್ಯಕರ್ತೆಯರಿಗೆ ಸೂಕ್ತ ರೀತಿಯ ಪಿಪಿಇ ಕಿಟ್ ಗಳನ್ನು ನೀಡಲಾಗುತ್ತಿಲ್ಲ. ಈಗಾಗಲೇ ಸೋಂಕಿಗೊಳಗಾಗಿ ಮೂವರು ಕಾರ್ಯಕರ್ತೆಯರು ಸಾವನ್ನಪ್ಪಿದ್ದಾರೆ. ಹಲವರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಇದು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ಆಶಾ ಕಾರ್ಯಕರ್ತೆಯರು ರೂ.4000 ರಾಜ್ಯ ಸರ್ಕಾರದಿಂದ ರೂ.2,000 ಕೇಂದ್ರದಿಂದ ಸೇರಿ ಒಟ್ಟು ರೂ.6,000 ವೇತನ ಪಡೆಯುತ್ತಿದ್ದಾರೆ.
ಆಶಾ ಕಾರ್ಯಕರ್ತೆಯರ ಕಾರ್ಯಕ್ರಮದ ಉಸ್ತುವಾರಿ ಅಧಿಕಾರಿ ಡಾ. ಪ್ರಭುದೇವ ಗೌಡ ಮಾತನಾಡಿ, ತಮ್ಮ ತಮ್ಮ ಅತ್ಯುತ್ತಮ ಸಾಧನೆಗಳಿಂದಾಗಿ ಈಗಾಗಲೇ ಶೇ.60ರಷ್ಟು ಕಾರ್ಯಕರ್ತೆಯರು ರೂ.4000 ಪ್ರೋತ್ಸಾಹ ಧನ ಪಡೆಯುತ್ತಿದ್ದಾರೆ. ಇನ್ನೂ ಶೇ.20ರಷ್ಟು ಕಾರ್ಯಕರ್ತೆಯರು ನಿಗದಿತ 6,000 ಜೊತೆಗೆ 5,000 ರೂ ಪಡೆಯುತ್ತಿದ್ದಾರೆ. ಅವರಲ್ಲಿ ಕೇವಲ 10% ರಷ್ಟು ಜನರು ಯಾವುದೇ ಹೆಚ್ಚುವರಿ ಕೆಲಸವನ್ನು ಕೈಗೆತ್ತಿಕೊಂಡಿಲ್ಲ ಹೀಗಾಗಿ 6,000 ರೂ.ಗಳ ಸ್ಥಿರ ಪ್ರೋತ್ಸಾಹವನ್ನೇ ಗಳಿಸುತ್ತಾರೆ ಎಂದು ತಿಳಿಸಿದ್ದಾರೆ.
Follow us on Social media