ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ಮೇಲ್ಮನೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥ ನಾರಾಯಣ್ ಹಾಗೂ ಮೇಲ್ಮನೆ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ನಡುವೆ ಮಾತಿನ ಜಟಾಪಟಿ ನಡೆಯಿತು.
ಇದರಿಂದ ಆಡಳಿತ ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಸಂದರ್ಭವೂ ಸೃಷ್ಟಿಯಾಗಿತು. ವಿಶ್ವನಾಥ್ ಮಾತಿಗೆ ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿದ್ದು ಸದನದಲ್ಲಿ ರಾಜಕೀಯ ಚರ್ಚೆಗೂ ಕಾರಣವಾಯಿತು.
ಸಂತಾಪ ಸೂಚನೆ ಬಳಿಕ ಮುಂದೂಡಿಕೆಯಾಗಿದ್ದ ಸದನ ಮತ್ತೆ ಸಮಾವೇಶಗೊಳ್ಳುತ್ತಿದ್ದಂತೆಯೇ ಬಿಜೆಪಿಯ ಹೆಚ್.ವಿಶ್ವನಾಥ್, ಕೇಂದ್ರ ಸರ್ಕಾರದ ಉದ್ದೇಶಿತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವ ಕುರಿತು ಪ್ರಸ್ತಾಪಿಸಿದರು. ಉನ್ನತ ಶಿಕ್ಷಣ ಇಲಾಖೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಇದಕ್ಕೆ 15 ಜನರ ಸಮಿತಿ ರಚಿಸಿದೆ. ಆ ಸಮಿತಿಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಕಾನೂನುಬಾಹಿರ ಎಂದರು. ಇದಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು.
ಕೆಫೆ ಕಾಫಿ ಡೇ ಮಾಜಿ ಅಧ್ಯಕ್ಷ ಎಸ್.ವಿ ರಂಗನಾಥ್ ಅವರು ಅಪರಾಧ ಮಾಡಿದ ಸಂಸ್ಥೆಯಲ್ಲಿದ್ದವರು. ಅಪರಾಧದಲ್ಲಿ ಭಾಗಿಯಾದ ವ್ಯಕ್ತಿಯನ್ನು ತಂದು ಅಧ್ಯಕ್ಷರನ್ನಾಗಿ ಮಾಡಿದ್ದೇಕೆ? ರಾಜ್ಯದಲ್ಲಿ ಬೇರೆ ಶಿಕ್ಷಣ ತಜ್ಞರಿಲ್ಲವೇ ಎಂದು ಪ್ರಶ್ನಿಸಿದರು.
ಇದು ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರ. ಆದರೆ ಉನ್ನತ ಶಿಕ್ಷಣ ಸಚಿವರು ಈ ನೀತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ತಕ್ಷಣವೇ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಪಡೆ ಅಧ್ಯಕ್ಷರನ್ನು ಬದಲಿಸಿ ಎಂದು ಸದನದಲ್ಲಿ ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಹ ಸಹಮತಿ ವ್ಯಕ್ತಪಡಿಸಿದರು.
ಆಗ ಅಶ್ವತ್ಥ ನಾರಾಯಣ್, ರಂಗನಾಥ್ ಅವರು ಯಾವುದೇ ತಪ್ಪು ಮಾಡಿಲ್ಲ.ಎಸ್.ವಿ.ರಂಗನಾಥ್‌ಗೆ ಶಿಕ್ಷಣ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಇದೆ.ಅವರು ಹುದ್ದೆ ನಿಭಾಯಿಸಲು ಸೂಕ್ತ ವ್ಯಕ್ತಿ ಎಂದೇ ಪರಿಗಣಿಸಿಯೇ ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸಲಾಗಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಆಗ ಅಶ್ವತ್ಥನಾರಾಯಣ್ ಮಾತಿಗೆ ಐ ಯಾಮ್ ಸಾರಿ ಎಂದ ವಿಶ್ವನಾಥ್, ಸಚಿವರು ಶಿಕ್ಷಣ ನೀತಿಯನ್ನು ಓದದೇ ಬಂದಿದ್ದಾರೆ ಎಂದಾಗ ಹೆಚ್.ವಿಶ್ವನಾಥ್ ಅವರ ವಿರುದ್ಧ ಕಿಡಿಕಾರಿದರು. ನಾವು ಯಾವುದೇ ಕಾರಣಕ್ಕೂ ಎಸ್.ವಿ.ರಂಗನಾಥ ಅವರನ್ನು ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಜೊತೆಗೆ ರಂಗನಾಥ್ ವಿರುದ್ಧದ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಲು ಸದನಕ್ಕೆ ಒತ್ತಾಯಿಸಿದರು.
Follow us on Social media