Breaking News

ರಾಮ ಮಂದಿರಕ್ಕಾಗಿ ಕರ್ನಾಟಕದಿಂದ ಮಣ್ಣು, ನೀರು ರವಾನೆ!

ಬೆಂಗಳೂರು: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಸಮಾರಂಭ ನಡೆಯಲಿದ್ದು, ರಾಜ್ಯದಿಂದಲೂ ತನ್ನದೇ ಆದ ಕೊಡುಗೆಯನ್ನು ನೀಡಲಾಗುತ್ತಿದೆ.

ಪ್ರಮುಖ ನದಿಗಳು ಮತ್ತು ಕೆಲವು ಧಾರ್ಮಿಕ ಸ್ಥಳಗಳಲ್ಲಿ ಸಂಗ್ರಹಿಸಿದ ಮಣ್ಣನ್ನು ಕೊಡುಗೆಯಾಗಿ ರವಾನಿಸಲಾಗಿದೆ. ದೇವಾಲಯದ ಸ್ಥಳವನ್ನು ಪವಿತ್ರಗೊಳಿಸಲು ಪವಿತ್ರ ಮಣ್ಣು ಮತ್ತು ನೀರನ್ನು  ಬಳಸಲಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಘಟಕ ಭಾನುವಾರ ತಿಳಿಸಿತು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾವೇರಿ ಮತ್ತು ಕಪಿಲಾ ನದಿಯ ನೀರನ್ನು ಕಳುಹಿಸಿದ್ದಾರೆ.ಧರ್ಮಸ್ಥಳ  ಮಂಜನಾಥ ಸ್ವಾಮೀಜಿ  ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ನೇತ್ರಾವತಿ ನದಿಯಿಂದ ನೀರನ್ನು  ಕಳುಹಿಸಿದರೆ, ಶೃಂಗೇರಿ ಶಂಕರಾಚಾರ್ಯ ಶ್ರೀ  ಭಾರತೀ ತೀರ್ಥರು, ತುಂಗಾ, ಭದ್ರಾ ಮತ್ತು ಶರಾವತಿ ನದಿ ನೀರನ್ನು ಸಂಗ್ರಹಿಸಿದ್ದಾರೆ ಎಂದು ವಿಹೆಚ್ ಪಿ ಪ್ರಚಾರ ಪ್ರಮುಖ ಬಸವರಾಜ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಇತರ ಮಠದ ಶ್ರೀಗಳು ಕೃಷ್ಣಾ, ಭೀಮಾ, ಮಲ್ಲಪ್ರಭಾ ಮತ್ತು ಘಟ್ಟಪ್ರಭಾ ನದಿಗಳ ನೀರು ಹಾಗೂ ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ಉಡುಪಿಯ ಶ್ರೀ ಕೃಷ್ಣ, ತುಮಕೂರಿನ ಸಿದ್ದಗಂಗಾ ಮಠ, ಬಾಳೇಹೊನ್ನೂರಿನ ರಂಭಾಪುರಿ, ದತ್ತ ಪೀಠದಿಂದ ಮಣ್ಣನ್ನು ಕಳುಹಿಸಿದ್ದಾರೆ .

ಈ ಮಧ್ಯೆ ಮೈಸೂರಿನ ಹಿರಿಯ ಬಿಜೆಪಿ ಮುಖಂಡ ಎಸ್.ಎ. ರಾಮದಾಸ್ , ಭೂಮಿ ಪೂಜೆ ಅಂಗವಾಗಿ ಸಾಮೂಹಿಕ ವಿಶೇಷ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕೆಆರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 10 ಸಾವಿರ ಮನೆಗಳು, 312 ದೇವಾಲಯಗಳು, 25 ರಾಮ ಮಂದಿರಗಳಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ. 

ವಿಶೇಷ ಪೂಜೆ ಅಲ್ಲದೇ, 14 ಸರ್ಕಲ್ ಗಳಲ್ಲಿ ರಾಮನ ಪೂಜೆ ನಡೆಯಲಿದೆ. ಡಿಸೆಂಬರ್ 6 ರಂದು  ರಾಮಜನ್ಮಭೂಮಿ ಆಂದೋಲನದಲ್ಲಿ ಭಾಗಿಯಾಗಿದ್ದ ಕರಸೇವಕರನ್ನು ಸಲ್ಮಾನಿಸಲಾಗುವುದು. ಮೈಸೂರಿನಿಂದ ವಿಶೇಷ ರೈಲಿನ ಮೂಲಕ 500 ಕರಸೇವಕರನ್ನು ಕಳುಹಿಸಲು ಚರ್ಚಿಸಲಾಗುತ್ತಿದೆ ಎಂದು ರಾಮ ದಾಸ್ ತಿಳಿಸಿದ್ದಾರೆ.

ರಾಮ ಮಂದಿರ 400 ವರ್ಷಗಳ ಬೇಡಿಕೆ ಹಾಗೂ ನಿಲ್ಲದ ಆಂದೋಲನದ ಫಲಿತಾಂಶವಾಗಿದೆ. ಹಲವರು ಇದಕ್ಕಾಗಿ ತಮ್ಮ ಜೀವವನ್ನು ಬಲಿದಾನ ಮಾಡಿದ್ದಾರೆ. ಮಹಾತ್ಮ ಗಾಂಧಿ ಅವರ ಕನಸಾಗಿದ್ದ ರಾಮಮಂದಿರವನ್ನು ಎಲ್ಲರೂ ಒಗ್ಗಟ್ಟಾಗಿ ನಿರ್ಮಿಸುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

Follow us on Social media

About the author

×