ಬೆಂಗಳೂರು: ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ನ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನ 216 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ.
ಇಂದು ಮಧ್ಯಾಹ್ನದ ವರದಿಯಲ್ಲಿ 196 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿತ್ತು. ಆದರೆ ಸಂಜೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ವರದಿಯಲ್ಲಿ ಮತ್ತೆ 20 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ಇಂದು ಒಂದೇ ದಿನ 216 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ.
2 ಸಾವಿರ ಗಡಿಯತ್ತ ಕೊರೋನಾ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿದ್ದು 2 ಸಾವಿರದ ಗಡಿಯತ್ತ ದಾಪುಗಾಲಿರಿಸಿದೆ. ಶನಿವಾರ 24 ಗಂಟೆಗಳಲ್ಲಿ ಒಟ್ಟು 216 ಜನರಲ್ಲಿ ಸೊಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1959ಕ್ಕೇರಿಕೆಯಾಗಿದೆ. ಅಂತೆಯೇ ಇಂದು ಕೊರೋನಾ ವೈರಸ್ ಗೆ ಮತ್ತೊಂದು ಬಲಿಯಾಗಿದ್ದು, ಬೆಂಗಳೂರು ನಿವಾಸಿಯಾಗಿದ್ದ 32 ವರ್ಷದ ವ್ಯಕ್ತಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 43 ಕ್ಕೆ ಏರಿಕೆಯಾಗಿದೆ. ಮೃತ ವ್ಯಕ್ತಿ ಮೇ 19ರಂದು ಉಸಿರಾಟದ ತೊಂದರೆಯಿಂದ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ದೀರ್ಘಕಾಲೀನ ಕ್ಷಯದಿಂದ ಬಳಲುತ್ತಿದ್ದರು. ಇವರು ಇಲ್ಲಿಯವರೆಗೆ ರಾಜ್ಯದಲ್ಲಿ ಕೊರೋನದಿಂದ ಮೃತಪಟ್ಟ ಅತಿ ಕಿರಿಯ ರೋಗಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಯಾದಗಿರಿಯಲ್ಲಿ ಕೊರೋನಾ ಸ್ಫೋಟ
ಯಾದಗಿರಿ ಜಿಲ್ಲೆಯೊಂದರಲ್ಲೇ ಇಂದು ಬರೋಬ್ಬರಿ 72 ಪ್ರಕರಣಗಳು ಪತ್ತೆಯಾಗಿವೆ. ಗದಗದಲ್ಲಿ 15 ಮಂದಿಗೆ ಸೋಂಕು ತಗುಲಿದೆ, ರಾಯಚೂರಿನಲ್ಲಿ 40 ಪ್ರಕರಣಗಳು ವರದಿಯಾಗಿವೆ. ಚಿಕ್ಕಬಳ್ಳಾಪುರದಲ್ಲಿ 26, ಮಂಡ್ಯದಲ್ಲಿ 28, ಬೆಂಗಳೂರಿನಲ್ಲಿ 4, ಕಲಬುರಗಿಯಲ್ಲಿ 1, ಬೆಳಗಾವಿಯಲ್ಲಿ 1, ದಾವಣಗೆರೆಯಲ್ಲಿ 3, ಯಾದಗಿರಿಯಲ್ಲಿ 72, ಗದಗದಲ್ಲಿ 15, ಉತ್ತರ ಕನ್ನಡದಲ್ಲಿ 2, ಹಾಸನದಲ್ಲಿ 4, ಬೀದರ್ ನಲ್ಲಿ 3, ದಕ್ಷಿಣ ಕನ್ನಡದಲ್ಲಿ 3, ಧಾರವಾಡದಲ್ಲಿ 5. ಬಳ್ಳಾರಿಯಲ್ಲಿ 3, ಕೋಲಾರದಲ್ಲಿ 3 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 200ಕ್ಕೂ ಸೋಂಕಿತರಿಗೆ ಮುಂಬೈ ನಂಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.