Breaking News

ಯೂಟ್ಯೂಬ್‌ನಲ್ಲಿ ಪಾಠ, ಜೂನ್‌ನಲ್ಲಿ ಕಾಲೇಜು ಪರೀಕ್ಷೆ ನಡೆಸುವ ಚಿಂತನೆ: ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಬರುವ ಜೂನ್‌ ವೇಳೆಗೆ ನಡೆಸುವ ಉದ್ದೇಶ ಇದ್ದು, ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. 

ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಗುರುವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಜೂಮ್‌ ಆ್ಯಪ್‌ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಈ ವಿಷಯ ತಿಳಿಸಿದರು. 

“ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಪಾಠ ಪ್ರವಚನಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪರೀಕ್ಷೆ ಯಾವಾಗ, ಹೇಗೆ ನಡೆಸಬೇಕು ಎಂಬ ಬಗ್ಗೆ ಕುಲಪತಿಗಳ ಸಲಹೆ ಕೇಳಲಾಗಿದೆ. ಆನ್‌ಲೈನ್‌ ಮೂಲಕ ಪಾಠ ಪೂರ್ಣಗೊಳಿಸಿ ಪರೀಕ್ಷೆ ನಡೆಸಬೇಕೇ ಅಥವಾ ತರಗತಿಗಳು ಆರಂಭವಾದ ನಂತರ ತಡವಾಗಿ ಪರೀಕ್ಷೆ ನಡೆಸಬೇಕೇ ಎಂಬ ಬಗ್ಗೆ ಮಾಹಿತಿ ಕೋರಲಾಗಿದೆ. ನಾಳೆಯೊಳಗೆ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ವಾಟ್ಸಪ್‌ ಅಥವಾ ಇಮೇಲ್‌ ಮೂಲಕ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ,”ಎಂದು ಅವರು ಹೇಳಿದರು. 

“ಪ್ರಾಯೋಗಿಕ ಪರೀಕ್ಷೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಆಂತರಿಕ ಪರೀಕ್ಷೆಯ ಅಂಕಗಳನ್ನು ಆಧರಿಸಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ನಿರ್ಧರಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಹಿಂದಿನ ಪರೀಕ್ಷೆಗಳ ಫಲಿತಾಂಶವನ್ನು ತಡೆ ಹಿಡಿದಿದ್ದರೆ, ಕೂಡಲೇ ಆ ಫಲಿತಾಂಶಗಳನ್ನು ಪ್ರಕಟಿಸುವಂತೆ ಸೂಚಿಸಲಾಗಿದೆ,”ಎಂದು ಅವರು ವಿವರಿಸಿದರು. 

ಯೂಟ್ಯೂಬ್‌ ಪಾಠ
“ಕಲಿಕೆಗೆ ಲಾಕ್‌ಡೌನ್‌ ಅಡ್ಡಿ ಆಗಬಾರದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿವೆ. ಕಾಲೇಜುಗಳಲ್ಲಿ ಪಾಠ ಪ್ರವಚನ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪಾಠ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಸ್ವಯಂ ಆ್ಯಪ್‌ ಮೂಲಕವೂ ಆನ್‌ಲೈನ್‌ ತರಗತಿ ನಡೆಸಬಹುದು. 

ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಆಯುಕ್ತಾಲಯ ಯೂಟ್ಯೂಬ್‌ನಲ್ಲಿ ಪಾಠ ಮಾಡಿ ಅಪ್‌ ಲೋಡ್‌ ಮಾಡಿವೆ. ವಿಜಯೀಭವ ಮತ್ತು ಜ್ಞಾನ ನಿಧಿ ಎಂಬ ಚಾನೆಲ್‌ಗಳ ಮೂಲಕ ಪಾಠ ಪ್ರವಚನ ಮಾಡಲಾಗಿದೆ. ಜೂಮ್‌, ಸ್ಕೈಪ್‌ ಮೂಲಕ ಪಾಠ ಮಾಡಲಾಗುತ್ತಿದೆ. ಕರ್ನಾಟಕ ಮುಕ್ತ ವಿವಿ ಸಹ ಒಂದು ಆ್ಯಪ್‌ ಅಭಿವೃದ್ಧಿ ಮಾಡಿದ್ದು, ಶೀಘ್ರದಲ್ಲೇ ಅದು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಕಲಿಕೆಗೆ ಪೂರಕವಾದ ಅಂಶಗಳು ಇ-ಕಂಟೆಂಟ್‌ನಲ್ಲಿ ಲಭ್ಯವಿರಲಿದೆ,”ಎಂದರು.
 
“ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಪಠ್ಯಕ್ರಮ, ಬೋಧನಾ‌ ವಿಧಾನ, ಪರೀಕ್ಷಾ ವಿಧಾನ ಬದಲಾವಣೆಗೆ ಚಿಂತನೆ ನಡೆದಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈಗ ಅಥವಾ ನಂತರದ ದಿನಗಳಲ್ಲಿ ಅನುಷ್ಠಾನಗೊಳಿಸಬೇಕೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ಸಲಹೆ ನೀಡಲು ಸಮಿತಿಗಳನ್ನು ರಚಿಸಲಾಗಿದೆ,”ಎಂದು ತಿಳಿಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×