Breaking News

ಮೋದಿಯ 20 ಲಕ್ಷ ಕೋಟಿ ಪ್ಯಾಕೇಜ್ ದೊಡ್ಡ ಜೋಕ್‌, ಸುಳ್ಳು ಹೇಳಿದ್ದೇ ಒಂದು ವರ್ಷದ ಸಾಧನೆ: ಸಿದ್ದರಾಮಯ್ಯ

ಬೆಂಗಳೂರು:  ಪ್ರಧಾನಿ ನರೇಂದ್ರ ಮೋದಿ ಮತ್ತೆ ಮತ್ತೆ ಸುಳ್ಳು ಹೇಳಿರುವುದೇ ಒಂದು ವರ್ಷದ ಸಾಧನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಇಂದು ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 30ಕ್ಕೆ ಪ್ರಧಾನಿ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ ಪೂರೈಸಿದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. ದೇಶದ ಜನ ಮೋದಿಗೆ ವಿಶ್ವಾಸದಿಂದ ಎರಡನೇ ಅವಧಿಗೆ ಆಯ್ಕೆ ಮಾಡಿದ್ದಾರೆ. ಮೊದಲನೇ ಐದು ವರ್ಷ ಎಲ್ಲ ದೃಷ್ಟಿಯಿಂದ ವೈಫಲ್ಯ ಕಂಡಿತ್ತು. ಆರ್ಥಿಕ ಪರಿಸ್ಥಿತಿ ಕೆಳ‌ಮಟ್ಟಕ್ಕೆ ಹೋಗಿತ್ತು. ಮೋದಿ ಮೊದಲ ಐದು ವರ್ಷಗಳಲ್ಲಿ ಪ್ರಮುಖ ಭರವಸೆಗಳನ್ನು ಈಡೇರಿಸಲಿಲ್ಲ. ಸುಳ್ಳು ಹೇಳಿದ್ದರು, ಭರವಸೆ ಭರವಸೆಯಾಗಿಯೇ ಉಳಿದಿತ್ತು ಎಂದು ಟೀಕಿಸಿದರು.

ಒಂದು ವರ್ಷದಲ್ಲಿ 370ನೇ‌ ವಿಧಿಗೆ ತಿದ್ದುಪಡಿ, ಕಾಶ್ಮೀರ ವಿಚಾರ, ಅಯೋಧ್ಯೆ, ತ್ರಿವಳಿ ತಲಾಖ್ ರದ್ದು, 6 ಸಾವಿರ ಕೋಟಿ ಸಾಧನೆ ಎಂದು ಹೇಳಿದ್ದಾರೆ. ರಾಮಮಂದಿರ‌ ಕುರಿತ ತೀರ್ಪಿನ ಬಗ್ಗೆ ಸಾಧನೆ ಎಂದು ಹೇಳಿಕೊಂಡಿದ್ದಾರೆ. ಆದರೆ ರಾಮಮಂದಿರ ತೀರ್ಪು ಸುಪ್ರೀಂ ಕೋರ್ಟ್ ನೀಡಿದೆ. ಇದನ್ನು ಇವರು ತಮ್ಮ ಸಾಧನೆ ಎಂದು ಹೇಳಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಗಳ ಸಂದರ್ಭ ಬೇರೆ ಇತ್ತು. ಶೇಖ್‌ ಅಬ್ದುಲ್ಲಾ ಭಾರತದಲ್ಲಿ ಉಳಿಯುವುದಾಗಿ ತೀರ್ಮಾನ ಮಾಡಿದ್ದರು. ಆವತ್ತಿನ ಸನ್ನಿವೇಶ ಬೇರೆಯೇ ಆಗಿತ್ತು. 562 ರಾಜರಿಗೆ ಅವರವರದ್ದೇ ಆದ ಬೇಡಿಕೆ ಬೇರೆ ಇತ್ತು. ಅಂದಿನ ಸನ್ನಿವೇಶಕ್ಕೆ ತಕ್ಕಂತೆ ತೀರ್ಮಾನ ಮಾಡಿದ್ದರು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದರು. ಇದೀಗ ಮೋದಿ 370ನೇ ತಿದ್ದುಪಡಿ ತಂದಿದ್ದೇ ಸಾಧನೆ ಎಂದು ಬಿಂಬಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಯುವಕರಿಗೆ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ. ಬಂಡವಾಳ ಹೂಡಿಕೆ ಎಷ್ಟಾಗಿದೆ ಎಂದು ಪ್ರಶ್ನಿಸಿದ ಅವರು, ಮೋದಿ ಕೇವಲ ಭಾವನಾತ್ಮಕ ವಿಚಾರಗಳಿಂದ ಪ್ರಚೋದನೆ ಮಾಡುತ್ತಾರೆ. ದೇಶದ ಜಿಡಿಪಿ‌ ಪಾತಾಳಕ್ಕೆ ಕುಸಿದಿದೆ. 45 ವರ್ಷಗಳಲ್ಲಿ ಇಷ್ಟು ಕೆಳಮಟ್ಟಕ್ಕೆ ದೇಶದ ಜಿಡಿಪಿ ಬಂದಿರಲಿಲ್ಲ. ದೇಶದ ಜಿಡಿಪಿ ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತ ಕಡಿಮೆ‌ ಇದೆ. ದೇಶ ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ಯುವಕರು ಭವಿಷ್ಯ ರೂಪಿಸಿಕೊಳ್ಳದೇ ಬೀದಿ ಪಾಲಾಗುತ್ತಿದ್ದಾರೆ ಎಂದು ಟೀಕಿಸಿದರು.

ದೇಶದ ಅಭಿವೃದ್ಧಿಯ ಆಧಾರದಲ್ಲಿ ಒಬ್ಬ ವ್ಯಕ್ತಿಯ ನಾಯಕತ್ವ ಅಳೆಯಬೇಕು. ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ನಾಯಕತ್ವ ಪ್ರದರ್ಶಿಸಬಾರದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ರೈತರ ಸಂಕಷ್ಟಕ್ಕೆ ನೆರವು ನೀಡಿದ್ದಾರೆಯೇ?, ವೈಜ್ಞಾನಿಕ ಬೆಲೆ ಕೊಟ್ಟು ಅವರ ಫಸಲನ್ನು ಖರೀದಿ ಮಾಡಿದ್ದಾರೆಯೇ?, ಸರ್ಕಾರಕ್ಕೆ ಕಲಬುರಗಿಯಲ್ಲಿ ತೊಗರಿ ಖರೀದಿ ಮಾಡಲು ಸಾಧ್ಯವಾಗಲಿಲ್ಲ. ವರ್ಷಕ್ಕೆ ರೈತರಿಗೆ ಕೇವಲ 500 ರೂ. ಸಹಾಯಧನ ಸಾಕೇ? ನಾನು ರೈತರಿಗಾಗಿ ಆನ್‌ ಲೈನ್‌ ಮೂಲಕ ಖರೀದಿಗೆ ವ್ಯವಸ್ಥೆ ಮಾಡಿದ್ದೆ. ಆದರೆ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಪರವಾನಿಗೆ ಇಲ್ಲದೇ ಈಗ ಖರೀದಿ ಮಾಡಬಹುದು ಎಂದು ಹರಿಹಾಯ್ದರು.

ಬಿಜೆಪಿ ಸರ್ಕಾರಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಕೇಂದ್ರ ಸರ್ಕಾರ, ರಾಜ್ಯಗಳ ಅಧಿಕಾರ ಕಬಳಿಕೆ ಮಾಡುತ್ತಿದೆ. ರೈತರ ಜುಟ್ಟನ್ನು ಹಣ ಉಳ್ಳವರ ಕೈಗೆ ಕೊಟ್ಟಿದ್ದಾರೆ. ಕಾರ್ಮಿಕರ ಮೇಲೂ ಶೋಷಣೆ ನಡೆಯುತ್ತಿದೆ, ಕೊರೋನಾ ಹಿನ್ನೆಲೆ 80 ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಮರಣ ಹೊಂದಿದ್ದಾರೆ. ಇವರ ಸಾವಿಗೆ ಪ್ರಧಾನಿಯೇ ಹೊಣೆ ಎಂದು ಆರೋಪಿಸಿದರು.

ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ಮೋದಿಯ 20 ಲಕ್ಷ ಕೋಟಿ ದೊಡ್ಡ ಜೋಕ್ ಆಗಿದೆ. ಇದೂವರೆಗೆ ಕೇಂದ್ರದ ಖಜಾನೆಯಿಂದ ಒಟ್ಟು ಹಣ ನಗದು ಎಷ್ಟು ಹೊರಬಂದಿದೆ ಎಂಬುದನ್ನು ಮೋದಿ ಬಹಿರಂಗಪಡಿಸಲಿ. 2‌ ಲಕ್ಷ ರೂ. ಕೂಡ ಪರಿಹಾರ ಖಜಾನೆಯಿಂದ ಹೊರಬಂದಿಲ್ಲ. ಜಿಡಿಪಿಯ ಶೇ.1ರಷ್ಟು ಹಣ‌ಕೂಡ ಬಂದಿಲ್ಲ. ಬೇರೆ ದೇಶಗಳು ಜಿಡಿಪಿಯ ಶೇಕಡಾ. 20-30ರಷ್ಟು ಹಣ ಕೋವಿಡ್‌ ಪರಿಹಾರಕ್ಕೆ ನೀಡಿದ್ದಾರೆ ಎಂದರು.

ಕೊರೋನಾ ತಡೆಯಲು ಮೋದಿ ವಿಫಲರಾಗಿದ್ದಾರೆ. ಪಿಪಿಇ ಕಿಟ್ ಅತ್ಯಂತ ವಿಳಂಬವಾಗಿ ಬಂದಿದೆ ಎಂದು ಆರೋಪಿಸಿದರು.

ಜಾಗಟೆ ಬಾರಿಸಿ, ದೀಪ ಹಚ್ಚುವುದು ಮಾತ್ರ ಮೋದಿಯವರ ಸಾಧನೆ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಕೇರಳದಲ್ಲಿ ಫೆಬ್ರವರಿಯಲ್ಲಿ ಕೊರೋನಾ ಕಂಡು ಬಂದಿತ್ತು. ಸರ್ಕಾರ ಮಾರ್ಚ್ ಆರಂಭದಲ್ಲೇ ವಿಮಾನಗಳ ರದ್ದು ಮಾಡಬೇಕಿತ್ತು. ಟ್ರಂಪ್ ನ ಮೋದಿ ಭಾರತಕ್ಕೆ ಆಹ್ವಾನಿಸಿದ್ದು ಏಕೆ? ತಬ್ಲಿಘಿಗಳಿಗೆ ಅವಕಾಶ ಕೊಟ್ಟಿದ್ದು ಏಕೆ? ಗುಪ್ತಚರದಳಕ್ಕೆ ಈ ಬಗ್ಗೆ ಗೊತ್ತಿರಲಿಲ್ಲವೇ?. ಸಂಕಷ್ಟದ ಸಮಯದಲ್ಲಿ ರಾಜಕೀಯ ಮಾಡಲು ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನೆಗಳ ಸುರಿಮಳೆಗೈದರು.

ತಬ್ಲಿಘಿಗಳಿಂದಲೇ ಕೊರೋನಾ ಬಂದಿದೆ ಎಂದು ಅಪಪ್ರಚಾರ ಮಾಡುವ ಬಿಜೆಪಿ ನಾಯಕರು, ಇಂಗ್ಲೆಂಡ್, ಸ್ಪೇನ್, ಇಟಲಿ, ಅಮೇರಿಕಾದಲ್ಲಿ ಯಾವ ತಬ್ಲಿಘಿಗಳು ಇದ್ದರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.

ಬಿಜೆಪಿ ಸರ್ಕಾರದಲ್ಲಿ ಬಂಡಾಯ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಸರ್ಕಾರ ಬಿಜೆಪಿಯವರ ಕಚ್ಚಾಟದಿಂದಲೇ ಬಿದ್ದು ಹೋದರೆ ನಮ್ಮದೇನು ತಕರಾರು ಇಲ್ಲ. ಇಂಥ ಕೆಟ್ಟ ಸರ್ಕಾರವನ್ನು ಇತಿಹಾಸದಲ್ಲಿ ನೋಡಿಲ್ಲ ಎಂದು ಕಿಡಿಕಾರಿದರು.

ರಮೇಶ್ ಜಾರಕಿಹೊಳಿ ಜೊತೆಗೆ ಮಹೇಶ್ ಕುಮಠಳ್ಳಿ ಬಿಟ್ಟರೆ ಬೇರೆ ಯಾರೂ ಇಲ್ಲ. ಉಳಿದವರು ಹಣಕ್ಕಾಗಿ ಹೋಗಿದ್ದಾರೆ. ಸರ್ಕಾರದಲ್ಲಿ ಸೂಪರ್ ಸಿಎಂ ಬೇರೆ ಇದ್ದಾರೆ. ಅತ್ಯಂತ ಭ್ರಷ್ಟ ಸರ್ಕಾರ. ರಾಜ್ಯದ ಹಿತದೃಷ್ಟಿಯಿಂದ ಈ ಸರ್ಕಾರ ಹೋಗಬೇಕು ಎಂದು ಹೇಳಿದರು.

ಉಮೇಶ್ ಕತ್ತಿ ತಮ್ಮ ಸ್ನೇಹಿತ, ಅವನು ಜನತಾ ಪರಿವಾರದಲ್ಲಿ ಇದ್ದವನು. ಉಮೇಶ್ ಕತ್ತಿ ತಮ್ಮ ಭೇಟಿಗೆ ಬರುವ ವಿಚಾರ ಗೊತ್ತಿಲ್ಲ. ಬಿಜೆಪಿಯ ಬಿಕ್ಕಟ್ಟಿನಲ್ಲಿ ತಾವು ತಲೆ ಹಾಕುವುದಿಲ್ಲ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×