ಮೈಸೂರು: ಸದನವನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಗಳ ಸಚಿವ ಜೆ. ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿಗೆ ಆಡಳಿತಾರೂಢ ಹಾಗೂ ಪ್ರತಿಪಕ್ಷದ ಮುಖಂಡರು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಮುಂದಾಗಿರುವುದಾಗಿ ತಿಳಿಸಿದರು.
ಈ ಕಾರಣದಿಂದ ಕಳೆದ ಹದಿನೈದು ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಸದನ ನಡೆಸಲಾಗುವುದು, ಯಾವುದೇ ಕಾರಣಕ್ಕೂ ಮೊಟಕುಗೊಳಿಸುವುದಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವುದು ಸದನದ ಮೂಲ ಉದ್ದೇಶವಾಗಿದೆ ಎಂದರು.
ಶಾಲಾ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರ ಕುರಿತಂತೆ ಪ್ರತ್ರಿಕಿಯಿಸಿದ ಸಚಿವರು, ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಚಿಂತನೆಯನ್ನು ಸರ್ಕಾರ ನಡೆಸಿಲ್ಲ ಎಂದು ಸ್ಪಷ್ಪಪಡಿಸಿದರು.
ಹಲವಾರು ಕಾರಣಗಳನ್ನು ನೀಡಿ ಪರೀಕ್ಷೆಗೆ ಹಾಜರಾಗದಿದ್ದರೆ ಮತ್ತೆ ಪರೀಕ್ಷೆ ನಡೆಸುವುದಿಲ್ಲ, ಈಗಾಗಲೇ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಮಾಧುಸ್ವಾಮಿ ತಿಳಿಸಿದರು.
Follow us on Social media