ಮೈಸೂರು: ಬಿಜೆಪಿಯವರಿಗೆ ನಾಚಿಕೆಯಾಗುವುದಿಲ್ಲವೇ? ರಾಜಪ್ರಭುತ್ವದ ಕೊಲ್ಲಿ ರಾಷ್ಟ್ರಗಳಿಂದ ಜನತಂತ್ರದ ಭಾರತವು ಪಾಠ ಹೇಳಿಸಿಕೊಳ್ಳಬೇಕಾಗಿರುವುದು ಶೋಭಾಯಮಾನವಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
‘ಕೊಲ್ಲಿ ರಾಷ್ಟ್ರಗಳಲ್ಲಿ 25 ಲಕ್ಷ ಭಾರತೀಯ ಕುಟುಂಬಗಳು ಬೆವರು ಹರಿಸಿ ದುಡಿದ ಹಣವನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ.
ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ನಾಚಿಕೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.
‘ಪ್ರಕ್ಷುಬ್ದತೆಯ ಮಧ್ಯೆ ಸೌಹಾರ್ದ ಮಾತನ್ನಾಡಿರುವ ಮೋಹನ್ ಭಾಗವತ್ ನಿಲುವನ್ನು ಪ್ರತಾಪಸಿಂಹ, ಕಟೀಲ್, ಸಂತೋಷ್ ಜೀ, ಸಿ.ಟಿ.ರವಿ ಸ್ವಾಗತಿಸಿ ಇನ್ನೂ ಹೇಳಿಕೆ ನೀಡಿಲ್ಲವೇಕೆ.
ಭಾಗವತರು ಹೇಳಿದಂತೆ ಯಕ್ಷಗಾನ ನಡೆಯಬೇಕು. ಆದರೆ, ಆರ್‌ಎಸ್‌ಎಸ್, ಬಿಜೆಪಿಯವರು ಮಿತಿಯ ಗೆರೆಯನ್ನು ಮೀರಿ ಕುಣಿಯುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಮಸೀದಿಗಳಲ್ಲಿ ಶಿವಲಿಂಗ ಹುಡುಕಿ ದೇಶದ ಅಖಂಡತೆಗೆ ಧಕ್ಕೆ ತರಬಾರದು. ಮುಸ್ಲಿಮರು ಸೋದರರು, ನಮ್ಮ ಪೂರ್ವಿಕರೆಂದು ಭಾಗವತರು ಹೇಳಿಕೆ ನೀಡಿದ್ದಾರೆ. ಜಿಲ್ಲೆ, ತಾಲ್ಲೂಕುಗಳಲ್ಲಿ ಗೋಷ್ಠಿ ನಡೆಸಿ ಅವರ ಮಾತನ್ನು ತಲುಪಿಸಲಿ’ ಎಂದು ಸಲಹೆ ನೀಡಿದರು.