ಮೂಡುಬಿದಿರೆ: ಗ್ರಾಮ ಪಂಚಾಯತ್‌ನಲ್ಲಿ ನಡೆಯಬೇಕಿದ್ದ ದ್ವಿತೀಯ ಹಂತದ ಗ್ರಾಮಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಕಾರಣದಿಂದ ಗ್ರಾಮಸ್ಥರೆಲ್ಲರೂ ಆಕ್ರೋಶಗೊಂಡು ಸಭೆಯನ್ನು ರದ್ದುಗೊಳಿಸಿ, ಗೈರು ಹಾಜರಾದ ಇಲಾಖಾ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಬೆಳುವಾಯಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದಿದೆ.
ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮಸ್ಥ ಸದಾಶಿವ ಶೆಟ್ಟಿ ಅವರು ‘ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳೇ ಇಲ್ಲದೇ ಹೋದರೆ ಹೇಗೆ?.. ಸಮಸ್ಯೆ ಹೇಳಿಕೊಳ್ಳಲು ಅಧಿಕಾರಿಗಳೇ ಇಲ್ಲದಿದ್ದರೆ, ಜನರ ಸಮಸ್ಯೆಗಳನ್ನು ಬಗೆಹರಿಸುವರ‍್ಯಾರು..? ಅಧಿಕಾರಿಗಳಿಲ್ಲದಿದ್ದರೆ ಗ್ರಾಮಸಭೆ ಯಾಕೆ?’ ಎಂದು ನೋಡಲ್ ಅಧಿಕಾರಿಯನ್ನು ಪ್ರಶ್ನಿಸಿದರು.
ಗ್ರಾಮಸ್ಥೆ ನೀತಾ ಮಾತನಾಡಿ ‘ಯಾವ ಇಲಾಖೆಗಳಿಂದ ಅಧಿಕಾರಿಗಳು ಬಂದಿಲ್ಲ ಆ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳಿಗೂ ಸಮಯಪ್ರಜ್ಞೆ ಇರಬೇಕೆಂದು ಕಿಡಿಕಾರಿದರು.
ಗ್ರಾಮಸ್ಥರ ಪ್ರಶ್ನೆಗಳಿಗೆ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ ದೈಹಿಕ ಶಿಕ್ಷಣ ಪರಿವೀಕ್ಷಕ ನವೀನ್ ಪುತ್ರನ್ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಅಧಿಕಾರಿಗಳು ಅತೀ ಅಗತ್ಯವಾಗಿ ಬರಬೇಕಾಗಿರುತ್ತದೆ,
ಆದರೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆ ಗ್ರಾಮಸ್ಥರ ಅಭಿಪ್ರಾಯದಂತೆ ಸಭೆಯನ್ನು ನಡೆಸಲಾಗುವುದೆಂದು ಸ್ಪಷ್ಟಪಡಿಸಿದರು.
ಪಂಚಾಯತ್ ಅಧ್ಯಕ್ಷೆ ಸುಶೀಲ ಮಾತನಾಡಿ ಗ್ರಾಮಸ್ಥರಲ್ಲಿ ಸಭೆ ನಡೆಯಬೇಕೆ ಬೇಡವೇ ಎಂದಾಗ ಗ್ರಾಮಸ್ಥರು ಸರ್ವಾನುಮತದಿಂದ ಸಭೆಯನ್ನು ರದ್ದುಗೊಳಿಸುವಂತೆ ತಿಳಿಸಿದಾಗ ಗ್ರಾಮಸ್ಥರ ಅಭಿಪ್ರಾಯದಂತೆ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮಾ ನಾಯಕ್ , ಪಂಚಾಯತ್ ಸದಸ್ಯರು, ಕಂದಾಯ ಇಲಾಖೆ ಅಧಿಕಾರಿ ಅನಿಲ್, ಆರೋಗ್ಯ ಇಲಾಖೆ ಅಧಿಕಾರಿ ಡಾಕ್ಟರ್ ಭರತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರತಿ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Follow us on Social media