ಬೆಂಗಳೂರು: ಮಾಸ್ಕ್ ಗಳನ್ನು ಯಾವಾಗ, ಎಲ್ಲಿ ಧರಿಸಬೇಕೆಂಬ ಗೊಂದಲಗಳನ್ನು ಇದೀಗ ಬಿಬಿಎಂಪಿ ದೂರಾಗಿಸಿದ್ದು, ಕೋವಿಡ್ ನಿವಾರಣೆಯ ಕ್ರಮವಾಗಿ ಮಾಸ್ಕ್ ಧರಿಸುವ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಂಗಳವಾರ ಈ ಮಾರ್ಗಸೂಚಿ ಹೊರಡಿಸಿರುವ ಬಿಬಿಎಂಪಿ, ನಾಲ್ಕು ಚಕ್ರಗಳ ವಾಹನ ಚಾಲಕರು ಏಕಾಂಗಿಯಾಗಿ ವಾಹನ ಚಲಾಯಿಸುತ್ತಿದ್ದರೂ, ಕಿಟಕಿಗಳನ್ನು ಮುಚ್ಚಿದ್ದರೂ ಕೂಡ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕಾರು ನಿಲುಗಡೆ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು. ಬೈಕ್ ಸವಾರರು ಎಲ್ಲಾ ಸಂದರ್ಭದಲ್ಲಿಯೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸಬೇಕಾಗಿಲ್ಲ. ಏಕೆಂದರೆ ಚಿಕ್ಕ ಮಕ್ಕಳಿಗೆ ಮಾಸ್ಕ್ಗಳನ್ನು ಧರಿಸುವುದು ಕಷ್ಟಕರವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಯಾವಾಗ ಮಾಸ್ಕ್ ಧರಿಸಬೇಕು…?
ಕಾರು ಚಾಲನೆ ಮಾಡುತ್ತಿರುವಾಗ, ಒಬ್ಬರೇ ಇದ್ದರೂ ಕೂಡ ಮಾಸ್ಕ್ ಧರಿಸುವುದು ಕಡ್ಡಾಯ, , ಕಿಟಕಿಗಳನ್ನು ಮುಚ್ಚಿದ್ದರೂ ಕೂಡ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ದ್ವಿಚಕ್ರ ವಾಹನದಲ್ಲಿ ಒಬ್ಬರಿದ್ದರೂ, ಹಿಂಬದಿಯಲ್ಲಿ ವ್ಯಕ್ತಿಗಳು ಕುಳಿತಿರುವಾಗ ಮಾಸ್ಕ್ ಧರಿಸಬೇಕು.
ಶಾಲಾ-ಕಾಲೇಜು, ಮಾರ್ಕ್, ಸಾರ್ವಜನಿಕ ಶೌಚಾಲಯ, ಚಿತ್ರಮಂದಿರ, ಮಾಲ್, ಮಾರುಕಟ್ಟೆ, ಅಂಗಡಿ ಮಳಿಗೆ, ಕಚೇರಿ, ಮದುವೆ, ಸಭೆ ಸಮಾರಂಭ ಸೇರಿದಂತೆ ಇನ್ನಿತರೆ ಕಡೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಮನೆಯಲ್ಲಿ ಪ್ರಾಥಮಿಕ ಸಂಪರ್ಕಿತರು, ರೋಗ ಲಕ್ಷಣ ಇರುವವರು ಇದ್ದರೆ ಮಾಸ್ಕ್ ಧರಿಸುವುದು ಕಡ್ಡಾಯ. ಆದರೆ, ಆರೋಗ್ಯವಂತ ಕುಟುಂಬದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ.
ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ ಊಟ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದಕ್ಕೆ ವಿನಾಯಿತಿ ನೀಡಲಾಗಿದೆ. ಆದರೆ, ಸ್ಪಾ, ಕಟ್ಟಿಂಗ್ ಶಾಪ್, ರೆಸ್ಟೋರೆಂಟ್, ಬಾರ್ ಸೇರಿದಂತೆ ಇನ್ನಿತರೆ ಕಡೆ ಸೇವೆ ಒದಗಿಸುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಬೇಕಿದೆ.
ಮಾಸ್ಕ್ ಧಾರಣೆ ಕುರಿತ ನಿಯಮ ರೂಪಣೆಯಲ್ಲಿ ಯಾವ ಯಾವ ಅಧಿಕಾರಿಗಳಿದ್ದಾರೆ?
ಸಮಿತಿಗಳನ್ನು ಒಳಗೊಂಡಿರುವ ಬಿಬಿಎಂಪಿ ಮುಖ್ಯ ಕಚೇರಿ ನಿಯಮಗಳನ್ನು ಪರಿಶೀಲನೆ ನಡೆಸುತ್ತದೆ.
ನವೀನ್ ರಾಜ್ ಸಿಂಗ್, ಪ್ರಾದೇಶಿಕ ಆಯುಕ್ತ, ಬೆಂಗಳೂರು
ಸರ್ಫರಾಜ್ ಖಾನ್, ವಿಶೇಷ ಆಯುಕ್ತರು, ಎಸ್ಡಬ್ಲ್ಯೂಎಂ, ಬಿಬಿಎಂಪಿ
ಡಿ ರಂದೀಪ್, ಜಂಟಿ ಆಯುಕ್ತ, ಎಸ್ಡಬ್ಲ್ಯೂಎಂ, ಬಿಬಿಎಂಪಿ
ಕರ್ನಲ್ ರಾಜ್ಬೀರ್ ಸಿಂಗ್, ಮುಖ್ಯ ಮಾರ್ಷಲ್ ಅಧಿಕಾರಿ
ಮುಖ್ಯ ಆರೋಗ್ಯ ಅಧಿಕಾರಿ, ಸಾರ್ವಜನಿಕ ಆರೋಗ್ಯ, ಬಿಬಿಎಂಪಿ
ಮುಖ್ಯ ಎಂಜಿನಿಯರ್, ಎಸ್ಡಬ್ಲ್ಯೂಎಂ, ಬಿಬಿಎಂಪಿ
ಪೊಲೀಸ್ ಆಯುಕ್ತರು ನಾಮನಿರ್ದೇಶನ ಮಾಡಿದ ಹಿರಿಯ ಪೊಲೀಸ್ ಅಧಿಕಾರಿ
ಸಾರ್ವಜನಿಕರಿಗೆ ದಂಡ ವಿಧಿಸಲು ಯಾರಿಗೆ ಅಧಿಕಾರವಿದೆ?
ಮಾರ್ಷಲ್ಸ್ ಮತ್ತು ಪೊಲೀಸ್ ಅಧಿಕಾರಿಗಳು
ವಾರ್ಡ್ ಮಟ್ಟದ ಸಮಿತಿಯಲ್ಲಿರುವ ಸಹಾಯಕ ಎಂಜಿನಿಯರ್, ಹಿರಿಯ ಆರೋಗ್ಯ ನಿರೀಕ್ಷಕರು
ಕಾರ್ಯನಿರ್ವಾಹಕ, ವೈದ್ಯಕೀಯ ಆರೋಗ್ಯ ಅಧಿಕಾರಿಗಳನ್ನು ಒಳಗೊಂಡ ವಿಭಾಗ ಮಟ್ಟದ ಸಮಿತಿಗಳು
ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ವಾರ್ಡ್ ಮಟ್ಟದ ಸಮಿತಿಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿನೆ ನಡೆಸಬಹುದಾಗಿದೆ.
ವಲಯ ಆಯುಕ್ತರು, ಮುಖ್ಯ ಎಂಜಿನಿಯರ್, ಆರೋಗ್ಯ ಅಧಿಕಾರಿ, ವಲಯ ಮಾರ್ಷಲ್ ಮೇಲ್ವಿಚಾರಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಲಯ ಸಮಿತಿಗಳು ನಿಯಮಗಳನ್ನು ಪರಿಶೀಲನೆ ನಡೆಸಲಿವೆ.