ಶಿವಮೊಗ್ಗ: ಮಾರಕ ಕ್ಯಾನ್ಸರ್ ಕಾಯಿಲೆಗೆ ಔಷಧಿ ನೀಡಿ ಹೆಸರುವಾಸಿಯಾಗಿದ್ದ ನಾಟಿವೈದ್ಯ ನರಸಿಪುರ ನಾರಾಯಣಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗದ ಶಿಕಾರಿಪುರ ತಾಲೂಕು ಆನಂದಪುರ ಸಮೀಪ ನರಸಿಪುರದಲ್ಲಿ ವಾಸವಿದ್ದ ನಾರಾಯಣಮೂರ್ತಿಯವರಿಗೆ 81 ವರ್ಷ ವಯಸ್ಸಾಗಿತ್ತು.
ಹಲವಾರು ವರ್ಷಗಳಿಂಡ ಕ್ಯಾನ್ಸರ್, ಮಧುಮೇಹ, ಮೂಳೆ ಸಮಸ್ಯೆ ಸೇರಿದಂತೆ ಅನೇಕ ಬಗೆಯ ರೋಗಗಳಿಗೆ ನಾಟಿ ಔಷಧಿ ನೀಡಿ ದೇಶ ವಿದೇಶಗಳಲ್ಲಿ ಹೆಸರಾಗಿದ್ದ ನಾರಾಯಣ ಮೂರ್ತಿ ನಿಧನರಾಗಿದ್ದು ಮೃತರಿಗೆ ಪತ್ನಿ, ನಾಲ್ವರು ಹೆಣ್ಣುಮಕ್ಕಳು ಹಾಗೂ ಓರ್ವ ಪುತ್ರರಿದ್ದಾರೆ.
ಇವರ ಬಳಿ ಕ್ಯಾನ್ಸರ್ ಔಷಧಿಗಾಗಿ ಭಾರತದ ಹಲವು ರಾಜ್ಯಗಳಲ್ಲದೆ ಆಸ್ಟ್ರೇಲಿಯಾ, ಶ್ರೀಲಂಕಾಗಳಿಂದ ಜನ ಆಗಮಿಸುತ್ತಿದ್ದರು. ದೇಶದ ನಾನಾ ರಾಜಕಾರಣಿಗಳು, ಉದ್ಯಮಿಗಳು ಇವರ ಬಳಿ ಔಷಧಕ್ಕಾಗಿ ಬಂದಿದ್ದಿದೆ. ದೇಶ, ವಿದೇಶದ ನಾನಾ ಪ್ರಸಿದ್ದ ಪತ್ರಿಕೆಗಳಲ್ಲಿ ಇವರ ಸಂದರ್ಶನ ಪ್ರಕಟವಾಗಿತ್ತು. ನಾರಾಯಣ ಮೂರ್ತಿಯವರು ನಮ್ಮ ಹಳೆಯ ಆಯುರ್ವೇದಿಕ್ ಔಷಧೋಪಚಾರದಿಂದ ದಿನನಿತ್ಯ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. . ಪ್ರತೀ ಗುರುವಾರ ಮತ್ತು ಭಾನುವಾರ ದೇಶದ ವಿವಿಧ ಮೂಲೆಯಿಂದ ಬರುವ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದರು. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಕೊನೆಯ ಆಶಾಕಿರಣವಾಗಿದ್ದರು. ತಾವೇ ಕಾಡಿನಿಂದ ಗಿಡಮೂಲಿಕೆಗಳನ್ನ ಆರಿಸಿಕೊಂಡು ಬಂದು ಔಷಧಿಗಳನ್ನು ಸಿದ್ಧಪಡಿಸುತ್ತಿದ್ದರು. 25ಕ್ಕೂ ಹೆಚ್ಚು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ನಾರಾಯಣಮೂರ್ತಿಗಳೊಂದಿಗೆ ೧೦ ಕ್ಕೂ ಹೆಚ್ಚು ಸೇವಾಸಂಸ್ಥೆಗಳು ಕೈಜೋಡಿಸಿದ್ದವು.
ಕೊರೋನಾ ಕಾರಣ ಕಳೆದ ಮೂರು ತಿಂಗಳಿನಿಂದ ಔಷಧ ನೀಡುವುದನ್ನು ನಾರಾಯಣಮೂರ್ತಿ ನಿಲ್ಲಿಸಿದ್ದರು. ಇದೀಗ ಅವರ ನಿಧನದ ನಂತರ ಅವರ ಪುತ್ರ ಈ ನಾಟಿಔಷಧಿ ನೀಡುವ ಪಾರಂಪರಿಕ ವೃತ್ತಿ ಮುಂದುವರಿಸಲಿದ್ದಾರೆ ಎನ್ನಲಾಗಿದೆ.
Follow us on Social media