ನವದೆಹಲಿ: ಗಾಯದ ಸಮಸ್ಯೆ ಕಾರಣ ಟೀಂ ಇಂಡಿಯಾದಿಂದ ಹಲವು ತಿಂಗಳು ಕಾಲ ದೂರ ಉಳಿದಿರುವ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಿರಾಮದ ದಿನಗಳಲ್ಲಿ ಸಾಲು ಸಾಲು ಸಿಹಿ ಸುದ್ದಿಗಳನ್ನೇ ನೀಡಿದ್ದಾರೆ.
ಕಳೆದ ಜನವರಿಯಲ್ಲಿ ಬಾಲಿವುಡ್ ಬೆಡಗಿ ಹಾಗೂ ಕನ್ನಡದ ‘ದನಾಕಾಯೋನು’ ಸಿನಿಮಾದಲ್ಲಿ ನಟಿಸಿದ್ದ ಸರ್ಬಿಯಾ ಮೂಲದ ನಟಿ ನತಾಶಾ ಸ್ಟ್ಯಾನ್‌ಕೊವಿಚ್ ಅವರೊಟ್ಟಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್, ಇದೀಗ ಮದುವೆಗೂ ಮೊದಲೇ ತಂದೆಯಾಗುತ್ತಿರುವ ಸುದ್ದಿ ಸ್ಫೋಟಿಸಿದ್ದಾರೆ.
28 ವರ್ಷದ ನಟಿ ನತಾಶಾ 26 ವರ್ಷದ ಸ್ಟಾರ್ ಕ್ರಿಕೆಟಿಗ ಮತ್ತು ಇಬ್ಬರೂ ಏಕಕಾಲದಲ್ಲಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಈ ಶುಭ ಸುದ್ದಿಯನ್ನು ಭಾನುವಾರ ಹಂಚಿಕೊಂಡಿದ್ದಾರೆ. ಆದರೆ, ಇಬ್ಬರ ವಿವಾಹ ಮಾತ್ರ ಇನ್ನು ನಡೆದಿಲ್ಲ. ಲಾಕ್‌ಡೌನ್ ಮುಗಿದ ಬಳಿಕ ಈ ಜೋಡಿ ಭವ್ಯ ಸಮಾರಂಭದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ.
ನತಾಶ ಮತ್ತು ನಾನು ಅದ್ಬುತವಾಗಿ ಸಾಗಿ ಬಂದಿದ್ದೇವೆ. ಈ ಪಯಣ ಮತ್ತಷ್ಟು ಹಸನಾಗಲಿದೆ. ನಾವಿಬ್ಬರೂ ಶೀಘ್ರದಲ್ಲೇ ನಮ್ಮ ಬಾಳಲ್ಲಿ ಹೊಸ ಜೀವವೊಂದರ ಆಗಮನವನ್ನು ನಿರೀಕ್ಷಿಸುತ್ತಿದ್ದೇವೆ. ಜೀವನದ ಈ ಹಂತವನ್ನು ಆನಂದಿಸುತ್ತಿದ್ದೇವೆ. ನಿಮ್ಮೆಲ್ಲರ ಶುಭ ಹಾರೈಕೆ ನಮ್ಮೊಟ್ಟಿಗೆ ಇರಲಿ,” ಎಂದು ಸರಣಿ ಫೋಟೊಗಳೊಂದಿಗೆ ಹಾರ್ದಿಕ್ ಪಾಂಡ್ಯ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ ಮದುವೆಗೂ ಮೊದಲೇ ತಂದೆಯಾದ ಭಾರತ ತಂಡದ ಮೊತ್ತ ಮೊದಲ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.
ನತಾಶಾ ಮತ್ತು ಹಾರ್ದಿಕ್ ಡೇಟಿಂಗ್‌ನಲ್ಲಿ ಇರುವ ಸುದ್ದಿ ಕಳೆದ ವರ್ಷ ಸಾಕಷ್ಟು ಸದ್ದು ಮಾಡಿತ್ತು. ಅಂತಿಮವಾಗಿ ಈ ಜೋಡಿ ತಮ್ಮ ನಿಶ್ಚಿತಾರ್ಥದ ವಿಚಾರವನ್ನು 2020ರ ಜನವರಿ 2ರಂದು ಬಹಿರಂಗ ಪಡಿಸಿ ಎಲ್ಲರ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮಿಬ್ಬರ ಹಲವು ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಬೆಸ್ಟ್ ಕಪಲ್ ಎಂದೇ ಅಭಿಮಾನಿಗಳಿಂದ ಕರೆದಿಕೊಂಡಿದ್ದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡದ ಪರ ಕೊನೆಯ ಬಾಡಿ ಆಡಿದ್ದ ಹಾರ್ದಿಕ್ ಪಾಂಡ್ಯ, ಬಳಿಕ ಬೆನ್ನು ನೋವಿನ ಸಮಸ್ಯೆಗೆ ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟು 5 ತಿಂಗಳ ಸುದೀರ್ಘಾವಧಿಯ ವಿಶ್ರಾಂತಿ ತೆಗೆದುಕೊಂಡಿದ್ದರು.
ಇದಾದ ನಂತರ ಡಿವೈ ಪಾಟಿಲ್ ಟಿ20 ಕ್ರಿಕೆಟ್ ಟೂರ್ನಿ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿ ಒಂದೇ ಇನಿಂಗ್ಸ್‌ನಲ್ಲಿ 20 ಸಿಕ್ಸರ್ ಸಿಡಿಸುವ ಮೂಲಕ ಟೀಮ್ ಇಂಡಿಯಾಗೆ ಮರಳಲು ತಾವು ರೆಡಿ ಎಂಬುದನ್ನು ಸಾಬೀತು ಪಡಿಸಿದ್ದರು. ಆದರೆ ಕೊರೊನಾ ವೈರಸ್ ಕ್ರಿಕೆಟ್ ಜಗತ್ತನ್ನು ಸ್ತಬ್ದವಾಗಿಸಿದ ಕಾರಣ ಪಾಂಡ್ಯ ಕಮ್‌ಬ್ಯಾಕ್‌ಗೆ ಅಡಚಣೆ ಎದುರಾಗಿದೆ.
Source : UNI
Follow us on Social media