ಮಂಗಳೂರು : ದ.ಕ. ಜಿಲ್ಲೆಯ ಜನತೆಯೇ ಆತಂಕ ಪಡುವ ಘಟನೆ ಏಪ್ರಿಲ್ 19ರಂದು ನಡೆದಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದೆ. ಬಂಟ್ವಾಳ ಮೂಲದ ಮಹಿಳೆಯೊಬ್ಬರು ಕೊರೊನಾ ವಿರುದ್ಧದ ಹೋರಾಟ ಗೆಲ್ಲಲು ವಿಫಲರಾಗಿದ್ದು, ಮೃತ ಮಹಿಳೆ ಅವರ ಕುಟುಂಬಸ್ಥರೊಂದಿಗಿದ್ದ ಫೋಟೊ, ಹೆಸರು ಹಾಗೂ ಮಾಹಿತಿ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ವೈರಲ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿ ಮುಂದಾಗಿದೆ.
ಕೊರೊನಾ ಸೋಂಕಿತ ಯಾವುದೇ ವ್ಯಕ್ತಿಯ ಹೆಸರು, ಫೋಟೊ ಸೇರಿದಂತೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶವಿಲ್ಲ. ಈ ಬಗ್ಗೆ ಆರಂಭದಲ್ಲೇ ಆರೋಗ್ಯ ಇಲಾಖೆ ಸ್ಪಶ್ಟವಾದ ಸೂಚನೆ ನೀಡಿದೆ. ತಪ್ಪಿದ್ದಲ್ಲಿ ಸೂಕ್ತ ಕ್ರಮದ ಎಚ್ಚರಿಕೆಯನ್ನು ಕೂಡ ನೀಡಿದೆ. ಆದಾಗಿಯೂ, ಕೆಲವರು, ರವಿವಾರದಂದು ಮೃತಪಟ್ಟ ಮಹಿಳೆಯ ಕುರಿತ ಮಾಹಿತಿ ಹಾಗೂ ಅವರು ಕುಟುಂಬಸ್ಥರೊಂದಿಗಿದ್ದ ಫೋಟೊ ಒಂದನ್ನು ವಾಟ್ಸಪ್ ಮೂಲಕ ವೈರಲ್ ಮಾಡಲಾಗಿದೆ.
ಈ ಬಗ್ಗೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮಾಹಿತಿ ಹಂಚಿಕೊಂಡವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದೆ. ಅಲ್ಲದೆ, ವಿವಿಧ ವಾಟ್ಸಪ್ ಗ್ರೂಪ್ ಗಳಲ್ಲಿ ಈ ಬಗ್ಗೆ ಮಾಹಿತಿ ವೈರಲ್ ಮಾಡಿದವರ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದೆ. ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮುಂದಾಗಿದೆ.
ಸೋಂಕಿತರ ಮಾಹಿತಿ ವೈರಲ್ ಮಾಡದಿರಿ:
ಇನ್ನು ರವಿವಾರದ ಘಟನೆ ಮಾತ್ರವಲ್ಲದೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ದಾಖಲಾಗುವ ಯಾವುದೇ ಕೊರೊನಾ ಸೋಂಕಿತರ ಕುರಿತಾದ ಮಾಹಿತಿಯನ್ನು ಯಾರೇ ಸಾರ್ವಜನಿಕರು ಪರಸ್ಪರ ವಿನಿಮಯ ಮಾಡಬಾರದು. ಸರಕಾರ ಹಾಗೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ ನೀಡಿರುವ ಆದೇಶವನ್ನು ಎಲ್ಲರೂ ಪರಿಪಾಲಿಸಬೇಕಾಗಿದ್ದು, ಪ್ರಜ್ಞಾವಂತ ನಾಗರಿಕರು ಎಚ್ಚರದಿಂದಿರಬೇಕಾಗಿದೆ. ಇನ್ನು ವಾಟ್ಸಪ್ ಗ್ರೂಪ್ ಗಳನ್ನು ಹೊಂದಿರುವ ಅಡ್ಮಿನ್ ಗಳು ಗ್ರೂಪ್ ಸಂಪೂರ್ಣವಾಗಿ ತಮ್ಮ ನಿಗಾದಲ್ಲಿರಿಸುವುದು ಅನಿವಾರ್ಯವಾಗಿದೆ. ಕೊರೊನಾ ಸೋಂಕಿಗೆ ಸಂಬಂಧಿಸಿ ವ್ಯಂಗ್ಯ ಬರಹ, ತಪ್ಪು ಮಾಹಿತಿ, ಸುಳ್ಳು ಸುದ್ದಿ ಹಾಗೂ ಸೋಂಕಿತರ ಮಾಹಿತಿ ರವಾನಿಸುವುದು ಅಪರಾಧವಾಗಿದ್ದು, ಯಾರೂ ಕೂಡ ಇಂತಹ ಕಾರ್ಯಗಳಿಗೆ ಮುಂದಾಗಬಾರದು.
Follow us on Social media