ಮಂಗಳೂರು: ಎರಡು ವರ್ಷದ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಜೆಎಂಎಫ್‌ಸಿ 2ನೆ ನ್ಯಾಯಾಲಯವು ಆರೋಪಿ ಬಸ್ ಚಾಲಕ ಕಾಟಿಪಳ್ಳದ ಉಸ್ಮಾನ್ ಎಂಬಾತನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2020ರ ಜನವರಿ 16ರಂದು ಬೆಳಗ್ಗೆ 10:20ಕ್ಕೆ ಕೃಷ್ಣಾಪುರದ ಸುಂದರ ಸಾಲ್ಯಾನ್ (70) ಎಂಬವರು ಬೈಕಂಪಾಡಿ ಜಂಕ್ಷನ್‌ನಲ್ಲಿ ಬಸ್ಸಿಗೆ ಕಾಯುತ್ತಿದ್ದಾಗ ಆರೋಪಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಸುಂದರ ಸಾಲ್ಯಾನ್‌ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಆರೋಪಿ ಬಸ್ ಚಾಲಕ ಉಸ್ಮಾನ್ ಅಜಾಗರೂಕತೆಯಿಂದ ಬಸ್ ಚಲಾಯಿಸಿ ಢಿಕ್ಕಿ ಪಡಿಸಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಸುಂದರ ಸಾಲ್ಯಾನ್ ಮೃತಪಟ್ಟಿದ್ದಾರೆ ಎಂದು ಅವರ ಸಂಬಂಧಿ ವಸಂತ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಸಂಚಾರ ಉತ್ತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಅಂಜಲಿ ಶರ್ಮ ಅವರು ಆರೋಪಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 6 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದರೆ ಮತ್ತೆ 100 ದಿನ ಶಿಕ್ಷೆ ಅನುಭವಿಸಲು ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಗೀತಾ ರೈ ವಾದಿಸಿದ್ದರು.
Follow us on Social media