ಮಂಗಳೂರು : ಕೊರೊನಾ ಭಯದ ನಡುವೆಯೂ ಗುರುವಾರ ನಡೆದ ದ್ವಿತೀಯ ಪಿ.ಯು.ಸಿ. ಇಂಗ್ಲೀಷ್ ಪರೀಕ್ಷೆಗೆ ದ. ಕನ್ನಡ ಜಿಲ್ಲೆಯಾದ್ಯಂತ 26,486 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 466 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ದ.ಕ. ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಇಂಗ್ಲೀಷ್ ಪರೀಕ್ಷೆಗೆ 26,952 ವಿದ್ಯಾರ್ಥಿಗಳು ರಿಜಿಸ್ಟ್ರೇಶನ್ (ನೊಂದಣಿ) ಆಗಿದ್ದು, ಒಟ್ಟು 26,486 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಇನ್ನು ದ.ಕ ಜಿಲ್ಲೆ ಹೊರತುಪಡಿಸಿ ಕೇರಳ ರಾಜ್ಯದಿಂದಲೂ ಸುಮಾರು 760 ರಷ್ಟು ವಿದ್ಯಾರ್ಥಿಗಳು ಆಗಮಿಸಿದ್ದರು. ತಲಪಾಡಿ ಗಡಿಭಾಗದವರೆಗೆ ಹೆತ್ತವರು ಮಕ್ಕಳನ್ನು ಬೆಳಿಗ್ಗೆ 7 ಗಂಟೆಗೆ ಕರೆತಂದಿದ್ದು ಆ ಬಳಿಕ 12 ಖಾಸಗಿ ಕಾಲೇಜು ಬಸ್ ಮತ್ತು 22 ಕೆಎಸ್‌ಆರ್‌ಟಿಸಿ ಬಸ್ಸುಗಳ ಮೂಲಕ ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಸಹಯೋಗದಿಂದ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗಿತ್ತು.
ಇನ್ನು ಕೋವಿಡ್ – 19 ರ ಮಾರ್ಗಸೂಚಿ ನಿಯಮದನ್ವಯ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ಚಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು, ಪೊಲೀಸ್, ಬಸ್ ಸಿಬ್ಬಂದಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಸಿಬ್ಬಂದಿಗಳು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.
Follow us on Social media