ಮಂಗಳೂರು: ದುಬೈನಿಂದ ಭಾನುವಾರ ಬಂದಿಳಿದ ಸಂದರ್ಭದಲ್ಲಿ ಜ್ವರದ ಲಕ್ಷಣಗಳು ಕಂಡುಬಂದ ಕಾರಣದಿಂದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ಗಾಗಿ ಸ್ಥಾಪಿಸಾಗಿದ್ದ ವಾರ್ಡ್ ನಲ್ಲಿ ನಿಗಾ ಇರಿಸಿದ್ದ ವ್ಯಕ್ತಿಯೊಬ್ಬ ತಡರಾತ್ರಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ದುಬೈನಿಂದ ವಿಮಾನದಲ್ಲಿ ಬಂದ ಉಳ್ಳಾಲ ನಿವಾಸಿಯಾಗಿರುವ ಪ್ರಯಾಣಿಕನನ್ನು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗಿತ್ತು. ಜ್ವರದ ಲಕ್ಷಣಗಳು ಕಂಡುಬಂದ ಕಾರಣ ವೆನ್ಲಾಕ್ ಆಸ್ಪತ್ರೆಯ ವಿಶೇಷ ನಿಗಾ ವಾರ್ಡ್ ಗೆ ಸ್ಥಳಾಂತರಿಸಲಾಗಿತ್ತು.
ತಡ ರಾತ್ರಿ 1 ಗಂಟೆ ಸುಮಾರಿಗೆ ಆತನ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದರು. ಆ ವ್ಯಕ್ತಿಯನ್ನು ಕಳಿಸಿಕೊಡುವಂತೆ ಗಲಾಟೆ ಮಾಡಿದ್ದರು. ಬಳಿಕ, ತಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿದ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿಕಂದರ್ ಪಾಷಾ, ‘ಜ್ವರ ಇದ್ದ ಕಾರಣ ಆತನನ್ನು ನಿಗಾದಲ್ಲಿ ಇರಿಸಲಾಗಿತ್ತು. ಗಲಾಟೆ ಮಾಡಿಕೊಂಡು ತಡ ರಾತ್ರಿ ಆಸ್ಪತ್ರೆಯಿಂದ ಹೊರಹೋಗಿದ್ದಾನೆ. ಆತನ ದಾಖಲೆಗಳು ನಮ್ಮ ಬಳಿ ಇವೆ. ಪತ್ತೆಗಾಗಿ ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ’ ಎಂದರು.
ಪೊಲೀಸರ ನೆರವಿನಲ್ಲಿ ಆತನನ್ನು ವಶಕ್ಕೆ ಪಡೆಯಲಾಗುವುದು. ರಕ್ತ ಮತ್ತು ಇತರ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಲಾಗುವುದು ಎಂದರು.
Follow us on Social media