ಉಳ್ಳಾಲ : ಕುತ್ತಿಗೆಗೆ ಶಾಲು ಸಿಲುಕಿ ಬಾಲಕಿಯೋರ್ವಳು ಮನೆಯೊಳಗೆ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಎಂಬಲ್ಲಿ ನಡೆದಿದೆ.
ಕಾಸರಗೋಡು ಎಡನೀರು ನಿವಾಸಿ ಕೃಷ್ಣ ನಾಯ್ಕ್ ಎಂಬವರ ಪುತ್ರಿ ಮೇಘಶ್ರೀ (13) ಸಾವನ್ನಪ್ಪಿದ ಬಾಲಕಿ.
ಚೆರ್ಕಳ ಎಡನೀರು ಮಠದ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಈಕೆ ಕೋಟೆಕಾರಿನ ಮಾವನ ಮನೆಯಲ್ಲಿ ಒಂದು ತಿಂಗಳಿನಿಂದ ಇದ್ದಳು. ಹಾಡು ಹಾಕಿ ನೃತ್ಯ ಮಾಡುವ ಹವ್ಯಾಸ ಹೊಂದಿದ್ದ ಈಕೆ, ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಮೇಘಶ್ರೀ ಸಾವಿನಲ್ಲಿ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆಮಂದಿಯನ್ನು ಹಾಗೂ ಹೆತ್ತವರನ್ನು ಉಳ್ಳಾಲ ಠಾಣಾ ಪೊಲೀಸರು ವಿಚಾರಣೆಗೆ ತೆಗೆದುಕೊಂಡಿದ್ದರು. ಆ ಬಳಿಕ ಸ್ಥಳ ಮಹಜರು ವೇಳೆ ಬಾಲಕಿ ಕೋಣೆಯ ಬಾಗಿಲು ಹಾಕಿದ್ದು, ಬಾಗಿಲು ಒಡೆದು ನೋಡಿದಾಗ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿರುವುದು ಗೊತ್ತಾಗಿದೆ.
ಮೇಘಶ್ರೀ ತನ್ನ ಬಣ್ಣ ಕಪ್ಪು ಎಂಬ ಜಿಗುಪ್ಸೆಯನ್ನು ಹೊಂದಿದ್ದಳು. ಇದರಿಂದ ಬೇಸತ್ತು ಆತ್ಮಹತ್ಯೆ ನಡೆಸಿರುವ ಶಂಕೆಯೂ ಒಂದು ಹಂತದಲಿ ವ್ಯಕ್ತವಾಗಿದೆ. ಆದರೆ ಕಿರಿ ವಯಸ್ಸಿನಲ್ಲಿ ಇನ್ನೂ ಬಾಳಿ ಬದುಕಬೇಕಾದ ಮಗು ದುರಂತ ಸಾವನ್ನಪ್ಪಿರುವುದು ಸ್ಥಳೀಯರನ್ನು ಆಘಾತಕ್ಕೀಡು ಮಾಡಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media