ಮಂಗಳೂರು : ಇಲ್ಲಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸಿಐಎಸ್ ಎಫ್, ಭದ್ರತಾ ಪಡೆಗಳು ಸಂಪೂರ್ಣ ಪರಿಶೀಲನೆ ನಡಸಿವೆ ಎಂದು ತಿಳಿದು ಬಂದಿದೆ.
ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಿಗೆ ಮಧ್ಯಾಹ್ನದ ಸುಮಾರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು ಇವರು ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣವನ್ನು ಸಂಪೂರ್ಣ ತಪಾಸಣೆ ಮಾಡಲಾಗಿದ್ದು ಈ ವೇಳೆ ಯಾವುದೇ ಶಂಕಿತ ವಸ್ತು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬೆದರಿಕೆ ಕರೆ ಎನ್ನಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಹೆಚ್ಚಿಸಲಾಗಿದೆ. ಬೆದರಿಕೆ ಕರೆ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದು, ಕಾರ್ಕಳದ ವ್ಯಾಪ್ತಿಯಲ್ಲಿ ಪೋನ್ ಕರೆ ಟವರ್ ಲೊಕೇಶನ್ ಪತ್ತೆಯಾಗಿದೆ.
ಈ ಬಗ್ಗೆ ಏರ್ ಪೋರ್ಟ್ ಅಧಿಕಾರಿಗಳು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜನವರಿ ತಿಂಗಳಲ್ಲಿ ಆದಿತ್ಯ ರಾವ್ ಎಂಬಾತ ವಿಮಾನ ನಿಲ್ದಾಣದಕ್ಕೆ ಬೆದರಿಕೆ ಕರೆ ಹಾಕಿದ್ದ. ಆತ ಇರಿಸಿದ್ದ ಸ್ಫೋಟಕ ಪತ್ತೆಯಾದ ಬಳಿಕ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಬಳಿಕ ಆತನನ್ನು ಬಂಧಿಸಿದ್ದರು.
Follow us on Social media