ಉಳ್ಳಾಲ : ತೆಂಗಿನಕಾಯಿ ಕೀಳಲೆಂದು ಬಂದವ ಮನೆಯಲ್ಲಿ ಒಂಟಿಯಾಗಿದ್ದ ಏಳನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
- ಮಂಜನಾಡಿ ನಿವಾಸಿ ಬಶೀರ್(28) ಕೊಣಾಜೆ ಪೊಲೀಸ್ ವಶದಲ್ಲಿರುವ ಆರೋಪಿ. ಬಶೀರ್ ತೆಂಗಿನಕಾಯಿ ಕೀಳುವ ಕೆಲಸ ಮಾಡುವವನಾಗಿದ್ದು, ಬಾಲಕಿ ಮನೆಮಂದಿಗೆ ಪರಿಚಿತ. ಇಂದು ಮಧ್ಯಾಹ್ನ ವೇಳೆ ಮನೆಯಲ್ಲಿ ಬಾಲಕಿ ಒಂಟಿಯಾಗಿದ್ದ ಸಂದರ್ಭ ತೆಂಗಿನಕಾಯಿ ತೆಗೆಯುವುದಾಗಿ ಹೇಳಿಕೊಂಡು ಬಂದಿದ್ದ. ಈ ವೇಳೆ ಬಾಲಕಿ ಒಂಟಿಯಾಗಿರುವುದನ್ನು ಕಂಡು ‘ ನನ್ನಷ್ಟೇ ನೀನು ಉದ್ದ ಇದ್ದೀಯಾ’ ಎಂದು ಮನೆಯೊಳಗಿದ್ದ ಬಾಲಕಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಹೊರಗೆ ಎಳೆದಿದ್ದಾನೆ. ಕೂಡಲೇ ಬಾಲಕಿ ಕಿರುಚಾಡಲು ಆರಂಭಿಸಿದ್ದಾಳೆ. ಮಾಹಿತಿ ಪಡೆದ ಸ್ಥಳೀಯರು ತಕ್ಷಣ ಮನೆಯತ್ತ ಆಗಮಿಸಿ ಬಶೀರ್ ನನ್ನು ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮನೆಮಂದಿಗೆ ಮರ್ಯಾದೆಗೆ ಹೆದರಿ ಪ್ರಕರಣ ದಾಖಲಿಸಲು ಹಿಂಜರಿದಿದ್ದು, ವಿಚಾರ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಹೆತ್ತವರಿಗೆ ಬುದ್ದಿ ಹೇಳಿ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪೊಲೀಸರು ವಿಚಾರಣೆ ನಡೆಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲು ಮುಂದಾಗಿರುವುದಾಗಿ ತಿಳಿದುಬಂದಿದೆ.