ಮಂಗಳೂರು : ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ತನಿಖೆ ನಡೆಸಲು ಪೊಲೀಸರು ಹತ್ತು ತಂಡಗಳನ್ನು ರಚಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆಗಾಗಿ ಕೇಂದ್ರೀಯ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದು, ವಿವಿಧ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದರು.
ಇನ್ನು ನಮಗೆ ಬಂದಿರುವ ಮಾಹಿತಿಯ ಪ್ರಕಾರ, ಘಟನೆಯ ಹಿಂದೆ ಆಳವಾದ ಪಿತೂರಿ ಇದೆ ಎಂದು ತೋರಿಸುತ್ತದೆ. ದುಷ್ಕರ್ಮಿಗಳು ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ನಡೆದ ಸ್ಫೋಟಕ್ಕೆ ಕೊಯಮತ್ತೂರಿನಲ್ಲಿ ನಡೆದ ಕಾರ್ ಸ್ಫೋಟಕ್ಕೆ ಹೋಲಿಕೆ ಇದೆ ಎನ್ನಲಾಗಿದ್ದು, ಜನರು ಭಯಭೀತರಾಗಬೇಡಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡದಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
ಮೂಲಗಳ ಪ್ರಕಾರ ಸ್ಫೋಟ ಸಂಭವಿಸಿದ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ನಕಲಿ ಆಧಾರ್ ಕಾರ್ಡ್ ಹೊಂದಿದ್ದ ಎನ್ನಲಾಗಿದ್ದು, ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಟ್ವೀಟ್ನಲ್ಲಿ ದಾಳಿಯ ಸಂಚು ದೃಢಪಟ್ಟಿದೆ. ಸ್ಫೋಟವು ಆಕಸ್ಮಿಕವಲ್ಲ. ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಭಯೋತ್ಪಾದನೆಯ ಕೃತ್ಯವಾಗಿದೆ ಎಂದು ಖಚಿತಪಡಿಸಿದ್ದಾರೆ.
ಶನಿವಾರ ಸಂಜೆ ಆಟೊರಿಕ್ಷಾದೊಳಗೆ ಪೊಲೀಸ್ ಠಾಣೆ ಬಳಿ ಸ್ಫೋಟ ಸಂಭವಿಸಿದ್ದು, ಪ್ರಯಾಣಿಕ ಮತ್ತು ಚಾಲಕ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
Follow us on Social media