ನವದೆಹಲಿ: ಭಾರತದಲ್ಲಿ ಭಾನುವಾರ ಕೊರೋನಾ ಸ್ಫೋಟಗೊಂಡಿದ್ದು, ಸಾರ್ವಕಾಲಿಕ ಗರಿಷ್ಟ 28,637 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಅದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,49,553ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 551 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 22,674ಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.
ಈ ನಡುವೆ 8,49,553 ಮಂದಿ ಸೋಂಕಿತರ ಪೈಕಿ 5,34,621 ಮಂದಿ ಗುಣಮುಖರಾಗಿದ್ದು, ಇನ್ನೂ ದೇಶದಲ್ಲಿ 2,92,258 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ದೇಶದ ಕೊರೋನಾ ಹಾಟ್’ಸ್ಪಾಟ್ ಎನಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ 7,842 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 2,46,600ಕ್ಕೆ ಏರಿಕೆಯಾಗಿದೆ. ಇದೇ ವೇಳೆ ದೆಹಲಿಯಲ್ಲಿ 1,781 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖಅಯೆ 1,10,921ಕ್ಕೆ ಹೆಚ್ಚಳವಾಗಿದೆ. ಅದೇ ರೀತಿ ತಮಿಳುನಾಡು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,34,226ಕ್ಕೆ ತಲುಪಿದೆ.
5 ಲಕ್ಷ ಗಡಿದಾಟಿದ ಗುಣಮುಖರ ಸಂಖ್ಯೆ
ಕೊರೋನಾ ವೈರಸ್ ದಿನದಿಂದ ದಿನಕ್ಕೆ ಭಾರೀ ವೇಗದಲ್ಲಿ ಏರಿಕೆಯಾಗುತ್ತಿರುವ ಮಧ್ಯೆಯೇ ಸೋಂಕಿನಿಂದ ಗುಣಮುಖರಾವದರ ಸಂಖ್ಯೆ 5 ಲಕ್ಷ ಗಡಿ ದಾಟಿದೆ. ಭಾನುವಾರದವರೆಗೂ ಗುಣಮುಖರಾದವರ ಸಂಖ್ಯೆ 5,34,621ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ ಕೊರೋನಾದಿಂದ ರೋಗಿಗಳು ಗುಣಮುಖರಾಗುತ್ತಿರುವ ಪ್ರಮಾಣ ಶೇ.62.78ರಷ್ಟಿದೆ. ಪ್ರಸ್ತುತ ದೇಶದಲ್ಲಿನ್ನೂ 2,92,258 ಸಕ್ರಿಯ ಪ್ರಕರಣಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.