ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ರೌದ್ರಾವತಾರ ಮುಂದುವರೆದಿದ್ದು, ಇಂದು ಮತ್ತೆ ಹೊಸ ಸೋಂಕಿತರ ಸಂಖ್ಯೆ 6 ಸಾವಿರ ಗಡಿ ದಾಟಿದ್ದು, ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 1.25 ಲಕ್ಷ ಗಡಿ ದಾಟಿದೆ.
ಭಾರತದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ದಿನದಿಂದ ಇಂದಿನ ವರೆಗೂ ಎಂದೂ ಕಾಣದ ಗರಿಷ್ಠ ಹೊಸ ಸೋಂಕಿತರ ಸಂಖ್ಯೆ ಇಂದು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೊಬ್ಬರಿ 6,654 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,25,101 ಏರಿಕೆಯಾಗಿದ್ದು, ಈ ಪೈಕಿ 69,597 ಸಕ್ರಿಯ ಪ್ರಕರಣಗಳಾಗಿವೆ. ಇನ್ನು 51,784 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದೂ ಕೂಡ ದೇಶಾದ್ಯಂತ 137 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 3,720ಕ್ಕೆ ಏರಿಕೆಯಾಗಿದೆ.
ನಿನ್ನೆ ಕೂಡ ಭಾರತದಲ್ಲಿ ಕೊರೋನಾ ವೈರಸ್ ಹೊಸ ಸೋಂಕಿತರ ಸಂಖ್ಯೆ 6 ಸಾವಿರ ಗಡಿ ದಾಟಿತ್ತು. ನಿನ್ನೆ ದೇಶಾದ್ಯಂತ 6088 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿತ್ತು. ಆ ಮೂಲಕ ಸತತ 2ನೇ ದಿನ ಭಾರತದಲ್ಲಿ ಕೊರೋನಾ ಹೊಸ ಪಾಸಿಟಿವ್ ಪ್ರಕರಣಗಳ ಸಂಖ್ಯೆ 6 ಸಾವಿರ ಗಡಿ ದಾಟಿದೆ.
ಇನ್ನು ಕೊರೋನಾ ವೈರಸ್ ಆರ್ಭಟಕ್ಕೆ ಮಹಾರಾಷ್ಟ್ರ ದೊಡ್ಡ ಪ್ರಮಾಣದಲ್ಲೇ ಆಘಾತ ಅನುಭವಿಸುತ್ತಿದ್ದು, ದೇಶದಲ್ಲಿ ದಾಖಲಾಗಿರುವ ಒಟ್ಟಾರೆ ಪ್ರಕರಣಗಳ ಪೈಕಿ ಮೂರನೇ ಒಂದು ಭಾಗ ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಇದೆ. ಇಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 44,582ಕ್ಕೆ ಏರಿಕೆಯಾಗಿದ್ದು, 2ನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 15,512 ಸೋಂಕಿತರಿದ್ದಾರೆ. ಮೂರನೇ ಸ್ಥಾನದಲ್ಲಿ ಗುಜರಾತ್ ಇದ್ದು, ಇಲ್ಲಿ 13,268 ಸೋಂಕಿತರಿದ್ದಾರೆ. 12,910 ಸೋಂಕಿತರನ್ನು ಹೊಂದಿರುವ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ.
Follow us on Social media