ಬೆಳಗಾವಿ: ಕಿಡ್ನಿ ಕಸಿಮಾಡಿಕೊಂಡಿದ್ದ ಮಹಿಳೆ ಔಷಧಿಗಾಗಿ ಪರದಾಡುತ್ತಿದ್ದ ಹಿನ್ನಲೆಯಲ್ಲಿ ಸೂಕ್ತ ಔಷಧಿ ಆಕೆಯ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಶೇಖವ್ವ ಅರಭಾವಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ವೇಳೆ ಪತಿ ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಜನವರಿ 17ರಂದು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ, ಕೊರೋನಾ ಸೋಂಕು ನಿಯಂತ್ರಿಸಲು ಲಾಕ್‍ಡೌನ್ ಆದೇಶವಾದ ಹಿನ್ನೆಲೆಯಲ್ಲಿ ಶೇಖವ್ವ ಅವರಿಗೆ ಅಗತ್ಯ ಔಷಧಿಗಳು ದೊರೆಯದೇ ಇದುದ್ದರಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದರು.
ತಾಯಿಯ ಆರೋಗ್ಯ ಸ್ಥಿತಿ ನೋಡಲಾಗದೇ, ಶೇಖವ್ವ ಅವರ ಮಗಳು ಪವಿತ್ರ ಟಿಕ್ ಟಾಕ್‍ನಲ್ಲಿ ವಿಡಿಯೋ ಮಾಡಿ, ತನ್ನ ತಾಯಿ ಸೂಕ್ತ ಔಷಧವಿಲ್ಲದೇ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಮುಖ್ಯಮಂತ್ರಿಗಳು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು.
ವಿಡಿಯೋ ನೋಡಿದ ತಕ್ಷಣವೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿಗಳು ಬೆಳಗಾವಿಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಕರೆ ಮಾಡಿ, ಶೇಖವ್ವ ಅರಭಾವಿ ಅವರಿಗೆ ತಕ್ಷಣವೇ ಒಂದು ತಿಂಗಳಿಗಾಗುವಷ್ಟು ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಆದೇಶಿಸಿದರು.
ಸಿಎಂ ಆದೇಶಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶೇಖವ್ವ ಅರಭಾವಿ ಅವರಿಗೆ ಅಗತ್ಯ ಔಷಧಿ ಪೂರೈಸಿ, ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿದ್ದಾರೆ.
Follow us on Social media