ಬೆಂಗಳೂರು: ಆಸ್ತಿ ಮಾರಾಟ ಮಾಡಿ ಜೈಲಿನಲ್ಲಿರುವ ಗಂಡನನ್ನು ಬಿಡಿಸಿಲು ಹಣ ನೀಡಲಿಲ್ಲ ಎಂದು ಆಕ್ರೋಶಗೊಂಡ ರೌಡಿಶೀಟರ್ ಗಂಡನೊಂದಿಗೆ ಸೇರಿ ತಮ್ಮನ ಹತ್ಯೆಗೆ ಸುಪಾರಿ ನೀಡಿದ್ದ ಅಕ್ಕ ಹಾಗೂ ನಾಲ್ವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಬಂಡೆ ಬೊಮ್ಮಸಂದ್ರದ ನಿವಾಸಿ, ರೌಡಿಶೀಟರ್ ಕ್ಯಾಟ್ ರಾಜನ ಪತ್ನಿ ಸುಮಲತಾ (25), ಅಂದ್ರಳ್ಳಿಯ ಮಂಜು ಅಲಿಯಾಸ್ ಮ್ಯಾಕ್ಸಿ (28), ಮಾರುತಿನಗರದ ಗೌತಮ್ ಅಲಿಯಾಸ್ ಜಂಗ್ಲಿ (28), ಅಂದ್ರಹಳ್ಳಿಯ ನಿವಾಸಿಗಳಾದ ವಿನಯ್ ನಾಯಕ್ ಅಲಿಯಾಸ್ ತುತ್ತೂರಿ (19) ಮತ್ತು ಮಾಲಾ ಅಲಿಖಾನ್ ಅಲಿಯಾಸ್ ಮೌಲಾ (21) ಬಂಧಿತ ಆರೋಪಿಗಳು.
ರೌಡಿಶೀಟರ್ ಲಕ್ಷ್ಮಣ್ ಕೊಲೆ ಪ್ರಕರಣದ ಆರೋಪಿಯಾಗಿರುವ ಕ್ಯಾಟ್ ರಾಜ ಸದ್ಯ ಜೈಲಿನಲ್ಲಿದ್ದು, ಆತನನ್ನು ಬಿಡಿಸಲು ದುಡ್ಡಿನ ಅವಗ್ಯವಿತ್ತು. ಹೀಗಾಗಿ ಜಮೀನು ಮಾರಾಟ ಮಾಡಿ ಹಣ ನೀಡುವಂತೆ ತಮ್ಮ ಸಂದೀಪ್ ರೆಡ್ಡಿಗೆ ಸುಮಲತಾ ಒತ್ತಾಯಿಸಿದ್ದಳು. ಆದರೆ, ಅಕ್ಕನ ಮಾತಿಗೆ ತಮ್ಮ ನಿರಾಕರಿಸಿ ಆಕೆಯಿಂದ ದೂರವಾಗಿ, ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಬಿ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದನು.
ಜಮೀನು ಮಾರಿ ಹಣ ನೀಡದ ಕಾರಣ ಆಕ್ರೋಶಗೊಂಡ ಕ್ಯಾಟ್ ರಾಜ ತನ್ನ ಸಹಚರರಾದ ಮಂಜು, ವಿನಯ್ ನಾಯಕ್, ಗೌತಮ್, ಮೌಲಾ ಅಲಿಖಾನ್ ಮತ್ತು ಶಶಾಂಕ ಎಂಬವರಿಗೆ ಸಂದೀಪ್ ರೆಡ್ಡಿಯನ್ನು ಕೊಲ್ಲಲು ಸುಪಾರಿ ನೀಡಿದ್ದು, ಅದಕ್ಕೆ ಸುಮಲತಾ ಕೂಡಾ ಸಹಾಯ ಮಾಡಿದ್ದಳು.
ನಂತರ ಸುಪಾರಿ ಪಡೆದ ಆರೋಪಿಗಳು ಕಳೆದ ಮೇ 29ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಾರಕಾಸ್ತ್ರಗಳೊಂದಿಗೆ ಸಂದೀಪ ರೆಡ್ಡಿ ಮನೆಗೆ ನುಗ್ಗಿ ಕೊಲೆ ಮಾಡುವ ಉದ್ದೇಶದಿಂದ ಆತನ ಮೇಲೆ ಲಾಂಗ್, ಮಚ್ಚುಗಳಿಂದ ಗಂಭೀರವಾಗಿ ಹಲ್ಲೆ ನಡೆಸಿ, ಪರಾರಿಯಾಗಿದ್ದರು. ಬಳಿಕ ರೆಡ್ಡಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ಅವರ ನಿರ್ದೇಶನದಂತೆ ಮೇರೆಗೆ ಯಶವಂತಪುರ ಎಸಿಪಿ ಎಂ.ಎಸ್. ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ಪ್ರತ್ಯೇಕ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Follow us on Social media