ಬೆಂಗಳೂರು : ಡೇಟಿಂಗ್ ಆಪ್ನಲ್ಲಿ ಪರಿಚಯವಾದ ಯುವತಿಯೊಬ್ಬಳಿಗೆ ಕೇವಲ ಆರೇ ದಿನಗಳಲ್ಲಿ 5.70 ಕೋಟಿ ರೂ. ಹಣ ನೀಡಿ ಬ್ಯಾಂಕ್ ವ್ಯವಸ್ಥಾಪಕನೊಬ್ಬ ಕೈ ಸುಟ್ಟುಕೊಂಡಿದ್ದಾನೆ. ಠೇವಣಿದಾರರ ಹೆಸರಿನಲ್ಲಿ ಸಾಲದ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ದುರುಪಯೋಗ ಆರೋಪದಲ್ಲಿ ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ಹನುಮಂತನಗರದ ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕ ಕೇರಳ ಮೂಲದ ಎಸ್. ಹರಿಶಂಕರ್ ಎಂಬಾತನೇ ಬಂಧಿತ ಆರೋಪಿ. ಆರೋಪಿಗೆ ಯುವತಿಯೊಬ್ಬಳು ಡೇಟಿಂಗ್ ಆಪ್ನಲ್ಲಿ ಪರಿಚಯವಾಗಿದ್ದಳು. ಆಕೆಯ ಮೋಹಕ ಮಾತುಗಳಿಗೆ ಮರುಳಾಗಿ ಕೇಳಿದಾಗಲೆಲ್ಲಾ ಆಕೆ ನೀಡಿದ ಬ್ಯಾಂಕ್ ಅಕೌಂಟ್ಗೆ ವ್ಯವಸ್ಥಾಪಕ ಹಣ ಜಮೆ ಮಾಡಿದ್ದಾನೆ. ಕೇವಲ ಆರು ದಿನದಲ್ಲಿ 136 ಬಾರಿ ಒಟ್ಟು 5.70 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾನೆ. ಈ ವಿಚಾರ ಮೇಲಧಿಕಾರಿಗಳ ಗಮನಕ್ಕೆ ಬಂದಿದ್ದು, ಕೂಡಲೇ ಹರಿಶಂಕರ್ರನ್ನು ಪ್ರಶ್ನಿಸಿದ್ದಾರೆ. ಬಳಿಕ ಆಂತರಿಕ ತನಿಖೆ ನಡೆಸಿದಾಗ ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದಿರುವುದು ಗೊತ್ತಾಗಿದೆ.
ಗ್ರಾಹಕಿ ಅನಿತಾ ಎಂಬುವವರು ಬ್ಯಾಂಕಿನಲ್ಲಿ 1.32 ಕೋಟಿ ರೂ. ಠೇವಣಿ ಇಟ್ಟಿದ್ದು, ಇದರ ಆಧಾರದ ಮೇಲೆ 75 ಲಕ್ಷ ರೂ. ಸಾಲ ಪಡೆದಿದ್ದರು. ಇದೇ ಗ್ರಾಹಕಿಯ ಹೆಸರಿನಲ್ಲಿ ಹರಿಶಂಕರ್, ಕೌಶಲ್ಯ ಮತ್ತು ಮುನಿರಾಜು ಎಂಬುವವರು ಉಪಾಯವಾಗಿ ಅನಿತಾರ ಠೇವಣಿ ಖಾತೆಯ ಲೀನ್ ಮಾರ್ಕ್ನ್ನು ಅನಧಿಕೃತವಾಗಿ ಅಳಿಸಿ ಅವರು ಠೇವಣಿ ಇರಿಸಿದ ಹಣದ ಮೇಲೆ ಓವರ್ ಡ್ರಾಫ್ಟ್ ಮುಖಾಂತರ ಹಣವನ್ನು ಮಂಜೂರು ಮಾಡಿಕೊಂಡಿದ್ದರು. ಒಟ್ಟು 5.70 ಕೋಟಿ ರೂ. ಗಳನ್ನು ಇದೇ ಮಾದರಿಯಲ್ಲಿ ವರ್ಗಾಯಿಸಿಕೊಂಡು ಅದನ್ನು ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆಗಳಿಗೆ ಮತ್ತು ರಾಜ್ಯದ 2 ಖಾತೆಗಳಿಗೆ ಜಮೆ ಮಾಡಿದ್ದರು.
5.70 ಕೋಟಿ ರೂಪಾಯಿ ಹಣ ದುರುಪಯೋಗ ಆರೋಪದ ಮೇಲೆ ಇಂಡಿಯನ್ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ಡಿ.ಎಸ್. ಮೂರ್ತಿ ವರು ಪೊಲೀಸ್ ದೂರು ನೀಡಿದ್ದರು. ಈ ದೂರು ಆಧರಿಸಿ ವ್ಯವಸ್ಥಾಪಕ ಹರಿಶಂಕರ್, ಸಹಾಯಕ ವ್ಯವಸ್ಥಾಪಕಿ ಕೌಶಲ್ಯ ಜರಾಯ್ ಮತ್ತು ಕ್ಲರ್ಕ್ ಮುನಿರಾಜು ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಈ ಪ್ರಕರಣದ ಪ್ರಮುಖ ಸೂತ್ರದಾರ ಹರಿಶಂಕರ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲದೆ, ಆತನನ್ನು 10 ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ.
ವಿಚಾರಣೆ ವೇಳೆ ಡೇಟಿಂಗ್ ಆಪ್ ಯುವತಿಯ ಮಾತುಗಳಿಗೆ ಮರುಳಾಗಿ ಈ ರೀತಿ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ಆದರೆ, ಅಪರಿಚಿತ ಯುವತಿಗೆ ಬ್ಯಾಂಕ್ ಮ್ಯಾನೇಜರ್ ಇಷ್ಟು ಮೊತ್ತದ ಹಣ ವರ್ಗಾವಣೆ ಮಾಡಲು ಸಾಧ್ಯವೇ ಎಂಬ ಅನುಮಾನವೂ ವ್ಯಕ್ತವಾಗಿದ್ದು, ಹಣ ದುರುಪಯೋಗಕ್ಕೆ ಬೇರೆ ಏನಾದರೂ ಕಾರಣಗಳಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆರೋಪಿ ಬಳಸುತ್ತಿದ್ದ ಮೊಬೈಲ್ನ್ನು ಬ್ಯಾಂಕ್ ವಶಕ್ಕೆ ತೆಗೆದುಕೊಂಡಿದೆ.
Follow us on Social media