ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಗೆ ಹೆದರಿ ಸೋಂಕಿತ ವೃದ್ಧೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಕುಣಿಗಲ್ನ 60 ವರ್ಷದ ವೃದ್ಧೆ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ.ಇಂದು ಬೆಳಿಗ್ಗಿನ ಜಾವ 2:30 ಸುಮಾರಿಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕುಣಿಗಲ್ ಮೂಲದ ಮೃತ ಮಹಿಳೆ ರಾಜಗೋಪಾಲನಗರದಲ್ಲಿ ವಾಸವಾಗಿದ್ದರು. ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲಿನ ದ್ರವದ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ದೃಢಪಟ್ಟಿತ್ತು.
ಕೊರೋನಾ ಸೋಂಕಿತರಿಗೆ ಮೀಸಲಿಟ್ಟ ವಿಶೇಷ ವಾರ್ಡ್ನಲ್ಲಿ ವೃದ್ಧೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ತಮಗೆ ಸೋಂಕು ತಗುಲಿದ್ದರಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾದ ವೃದ್ಧೆ, ಆಸ್ಪತ್ರೆಯ ಚಿಕಿತ್ಸಾ ವಾರ್ಡ್ನ ಶೌಚಾಲಯದಲ್ಲೇ ಸೀರೆಯಿಂದ ನೇಣು ಹಾಕಿಕೊಂಡು ಶುಕ್ರವಾರ ನಸುಕಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ವೃದ್ಧೆಯೊಂದಿಗೆ ಅವರ ಮನೆಯ ನಾಲ್ವರು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲೂ ಕೊರೋನಾ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Follow us on Social media