ಗೋಪಾಲ್ ಗಂಜ್: ಗೋಪಾಲ್ಗಂಜ್ ಮತ್ತು ಈಸ್ಟ್ ಚಂಪರನ್ ಭಾಗಗಳಿಗೆ ಕೊಂಡಿಯಾಗಿದ್ದ 1.4 ಕಿಮೀ ಉದ್ದದ ಸೇತುವೆಯ ಒಂದು ಭಾಗ ಕುಸಿದುಬಿದ್ದಿದೆ. ಗಂಡಕ ನದಿಯ ಮೇಲೆ ಕಟ್ಟಲಾಗಿರುವ ಈ ಸೇತುವೆ ಜೂನ್ 16ರಂದು ಉದ್ಘಾಟನೆಯಾಗಿತ್ತು. ಭಾರೀ ಮಳೆಯಿಂದಾಗಿ ಈ ಸೇತುವೆ ಬುಧವಾರ ಕುಸಿದಿದೆ.
1.4 ಕಿಮೀ ಉದ್ದದ ಈ ಸತ್ತರ್ಘಾಟ್ ಮಹಾಸೇತು ಸೇತುವೆಯನ್ನು ನಿರ್ಮಾಣ ಮಾಡಲು 8 ವರ್ಷಗಳು ತಗುಲಿದೆ. ಬಿಹಾರ್ ರಾಜ್ಯ ಪುಲ್ ನಿರ್ಮಾಣ್ ನಿಗಮ್ ಸಂಸ್ಥೆ 264 ಕೋಟಿ ರೂ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಿದೆ.
ಬಿಹಾರದಲ್ಲಿ ಇತ್ತೀಚೆಗೆ ಸುರಿದ ವ್ಯಾಪಕ ಮಳೆಯಿಂದಾಗಿ ಗಂಡಕ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಈ ಸೇತುವೆಯ ರಸ್ತೆಗೆ ಜೋಡಿಸುವ ಕಾಲುವೆಗೆ ನದಿ ನೀರಿನ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೇ ದುರ್ಬಲಗೊಂಡಿದೆ. ವಾಲ್ಮಿಕಿ ನಗರ್ನಿಂದ ಮತ್ತಷ್ಟು ನೀರು ಬಿಡುಗಡೆಯಾದ ಬಳಿಕ ಈ ಕಾಲುವೆ ಕೊಚ್ಚಿಹೋಗಿ ಈ ದುರಂತ ಸಂಭವಿಸಿದೆ.
ಸತ್ತರ್ಘಾಟ್ ಮಹಾಸೇತು ಈ ಭಾಗದ ಪ್ರಮುಖ ಸೇತುವೆಯಾಗಿದೆ. ಗೋಪಾಲ್ಗಂಜ್ ಮತ್ತು ಈಸ್ಟ್ ಚಂಪರಾಣ್ಯ ಮಧ್ಯೆ ಇದ್ದ ಪ್ರಮುಖ ಕೊಂಡಿಯಾಗಿದೆ. ಇದೇ ವೇಳೆ, ಸೇತುವೆ ಕುಸಿತ ಘಟನೆಯು ರಾಜಕೀಯ ವಾಗ್ಯುದ್ಧಕ್ಕೂ ಎಡೆ ಮಾಡಿಕೊಟ್ಟಿದೆ. ವಿಪಕ್ಷಗಳ ಮುಖಂಡರು ಸಿಎಂ ಮೇಲೆ ಎರಗಿಬಿದ್ದಿದ್ದಾರೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಮದನ್ ಮೋಹನ್ ಝಾ ಅವರು ನಿತೀಶ್ ಕುಮಾರ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.
“8 ವರ್ಷಗಳಿಂದ 263.47 ಕೋಟಿ ವೆಚ್ಚದಲ್ಲಿ ಕಟ್ಟಲಾಗಿದ್ದ ಸತ್ತರ್ಘಾಟ್ ಬ್ರಿಡ್ಜ್ ಅನ್ನು ನಿತೀಶ್ಕುಮಾರ್ ಅವರು ಜೂನ್ 16ರಂದು ಉದ್ಘಾಟನೆ ಮಾಡಿದರು. 29 ದಿನಗಳ ನಂತರ ಅದು ಕುಸಿದುಬಿದ್ದಿದೆ. 263 ಕೋಟಿ ರೂ ಒಂದು ಮೇಲ್ನೋಟದ ವಿಚಾರ ಅಷ್ಟೇ. ಅವರ ಹೆಗ್ಗಣಗಳು ಈ ಹಣದ ಮೊತ್ತದಷ್ಟು ಮದ್ಯ ಕುಡಿದಿರುತ್ತವೆ” ಎಂದು ಮಾಜಿ ಡಿಸಿಎಂ ತೇಜಸ್ವಿ ಯಾದವ್ ವ್ಯಂಗ್ಯ ಮಾಡಿದ್ದಾರೆ.
Follow us on Social media