ಬೆಂಗಳೂರು : 43 ದಿನಗಳ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳದ ಸರ್ಕಾರ, ಈಗ ಬಿಲ್ಡರ್‌ಗಳ, ಉಳ್ಳವರ ಲಾಬಿಗೆ ಮಣಿದು ಉಳಿದ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಮೀನಾಮೇಷ ಎಣಿಸುತ್ತಿರುವುದು ನಿಜಕ್ಕೂ ವಿಷಾದನೀಯ ಎಂದು ಆಮ್‌ಆದ್ಮಿ ಪಕ್ಷ(ಆಪ್) ಖಂಡಿಸಿದೆ.
ಪರ ಊರುಗಳಿಂದ ಬದುಕು ಕಟ್ಟಲು ಬಂದಂತಹ ದಿನಗೂಲಿ ಕಾರ್ಮಿಕರನ್ನು ಕಾಲು ಕಸದಂತೆ ಕಂಡ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಈಗ ಕೈ ಮುಗಿದು ಊರಿಗೆ ಹೋಗಬೇಡಿ ಎಂದು ಬೇಡಿಕೊಳ್ಳುತ್ತಿದೆ. ಕಾರ್ಮಿಕರು ತಮ್ಮ ಊರುಗಳಿಗೆ ಸೇರಿದರೆ, ಕಟ್ಟಡ ನಿರ್ಮಾಣದಂತಹ ಕಾಮಗಾರಿಗಳಿಗೆ ಕೂಲಿ ಕೆಲಸ ಮಾಡಲು ಕಾರ್ಮಿಕರು ಸಿಗುವುದಿಲ್ಲ. ಇದರಿಂದಾಗಿ ರಿಯಲ್ ಎಸ್ಟೇಟ್ ದೂರ್ತರ ಕೆಲಸಗಳು ನಿಂತು ಹೋಗುತ್ತವೆ ಎಂಬ ಕಾರಣಕ್ಕಾಗಿ ಹೊರಗೆ ಹೋಗದಂತೆ ತಡೆಯುವ ಸಂಚು ಇದಾಗಿದೆ ಎಂದು ರಾಜ್ಯ ಆಪ್ ಮುಖಂಡರು ಹೇಳಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಊಟ ಸಿಗುತ್ತಿದೆಯೇ, ಅವರಿಗೆ ಸಂಬಳ ಹೋಗುತ್ತಿದೆಯೇ ಎಂಬುದರ ಬಗ್ಗೆ ಕಿಂಚಿತ್ತೂ ಯೋಚಿಸದೇ ತಮ್ಮ ಪಾಡಿಗೆ ಇದ್ದ ಬಿಲ್ಡರ್‌ಗಳು, ಅಧಿಕಾರಿಗಳು, ಸಚಿವರ ಮೇಲೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ನಿಜಕ್ಕೂ ಅಮಾನವೀಯ ನಡೆ. ಕಾರ್ಮಿಕರ ಖಾತೆಗೆ 2 ಸಾವಿರ ರೂ. ನೀಡುವುದಾಗಿ ಹೇಳಿದ್ದ ಸರ್ಕಾರ, ಈ ಭರವಸೆಯನ್ನೆ ಮರೆತು ಕಾರ್ಮಿಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನೂ ನೀಡದೆ, ಈಗ ಕೆಲಸ ನೀಡುತ್ತೇವೆ ತೆರಳಬೇಡಿ ಎಂದು ಕೈಮುಗಿದು ಹೇಳುತ್ತಿರುವುದು ವ್ಯಂಗ್ಯ ಎಂದು ಅದು ಟೀಕಿಸಿದೆ.