ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳೀನ್ಕುಮಾರ್ ಕಟೀಲ್ ನೇಮಕಗೊಂಡಿದ್ದಾರೆ.
ಇಂದು ಬೆಳಗ್ಗೆ ಸಚಿವ ಸಂಪುಟ ರಚನೆಯಾಗಿದ್ದು 17 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಇತ್ತು.ಇದೀಗ ನಳೀನ್ಕುಮಾರ್ ಕಟೀಲ್ ಅವರನ್ನು ಇಂದಿನಿಂದಲೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಆದೇಶ ಹೊರಡಿಸಿದ್ದಾರೆ.ಕಳೆದ ಬಾರಿ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಮರ್ಥವಾಗಿ ಕಾರ್ಯ ನಿಭಾಯಿಸಿದ್ದರು. ಇದೀಗ ಆ ಜವಾಬ್ದಾರಿ ನಳೀನ್ ಕುಮಾರ್ ಅವರ ಹೆಗಲಿಗೇರಿದೆ.ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆ ಮಾಡಿದ ಬಳಿಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೇರಿದರು. ಅದಾದ ನಂತರ ಬಿ.ಎಸ್.ಯಡಿಯೂರಪ್ಪನವರು ನಿಭಾಯಿಸಿದ್ದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿತ್ತು.ಸಚಿವ ಸಂಪುಟ ರಚನೆಯಾಗುವುದಕ್ಕೂ ಮೊದಲು ಬಿಜೆಪಿ ರಾಜ್ಯಾಧ್ಯಕ್ಷರ ರೇಸ್ನಲ್ಲಿ ಅರವಿಂದ್ ಲಿಂಬಾವಳಿ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಆರ್.ಅಶೋಕ್ ಹೆಸರುಗಳೂ ಇದ್ದವು. ಇದೀಗ ಹೈಕಮಾಂಡ್ ನಳೀನ್ಕುಮಾರ್ ಕಟೀಲ್ ಅವರನ್ನು ನೇಮಕ ಮಾಡಿದೆ.
Follow us on Social media