ಬಂಟ್ವಾಳ: ಪೆಟ್ರೋಲ್ ಬಂಕ್‌ವೊಂದರಲ್ಲಿ ನಗದು ಕಳವುಗೈದ ಆರೋಪಿಯನ್ನು ಪೋಲಿಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಟ್ಲದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಬಂಬ್ರಾಣ ನಿವಾಸಿ ಫೈಜಲ್ ಅಲಿಯಾಸ್ ಪಗ್ಗು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲದಿನಗಳ ಹಿಂದೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಗ್ರಾಮದ ರೆಂಜ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರ ಕರಿಮಣಿ ಸರವನ್ನು ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಎಳೆದು ಪರಾರಿಯಾಗಿದ್ದರು.
ಆ ಬಳಿಕ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಸಾರ್ವಜನಿಕರು ಅವರನ್ನು ಹಿಡಿದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಕುದ್ದುಪದವಿನ ಪೆಟ್ರೋಲ್ ಬಂಕ್‌ನಿಂದ ನಗದು ಕಳವು ಗೈದಿರುವುದು ಬೆಳಕಿಗೆ ಬಂದಿತ್ತು.
ವರುಷಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ಜಗನ್ನಾಥ ಶೆಟ್ಟಿರವರ ಪಾಲುದಾರಿಕೆಯ ಎಸ್. ಆರ್ ಪೆಟ್ರೋಲ್ ಬಂಕ್‌ನಲ್ಲಿರುವ ಕಚೇರಿಯೊಳಗಿನ ಲಾಕರನ್ನು ಒಡೆದು ನಗದು ಕಳವುಗೈಯ್ಯಲಾಗಿತ್ತು.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವ್ಯಾಪಕ ಹುಡುಕಾಟ ನಡೆಸಿದ್ದಾರಾದರೂ ಪತ್ತೆ ಕಾರ್ಯ ನಡೆದಿರಲಿಲ್ಲ.
ಇದೀಗ ವಿಟ್ಲ ಠಾಣಾ ಪೊಲೀಸರು ಆ.24 ರಂದು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಪೈಕಿ ಫೈಝಲ್ ನನ್ನು ತಮ್ಮ ವಶಕ್ಕೆ ಪಡೆದು ಕಳವು ನಡೆಸಿದ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
Follow us on Social media