ಕೊಲ್ಕತ್ತಾ: ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದಿಂದ ಗೆದಿದ್ದ ಕೃಷಿ ಸಚಿವ ಹಾಗೂ ಹಿರಿಯ ಟಿಎಂಸಿ ಮುಖಂಡ ಶೋಭಾನ್ ದೇವ್ ಚಟ್ಟೋಪಾಧ್ಯಾಯ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಾದಿ ಸುಗಮ ಮಾಡಿಕೊಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಸೋತಿದ್ದರು. ಇದೀಗ ಮುಖ್ಯಮಂತ್ರಿಯಾಗಿರುವ ಅವರು, ಮುಂದಿನ ಆರು ತಿಂಗಳೊಳಗೆ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಬೇಕಾದದ್ದು ಅನೀವಾರ್ಯವಾಗಿದೆ.
ಬ್ಯಾನರ್ಜಿ ಅವರ ಮರು ಚುನಾವಣೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್, ಸೂಕ್ತ ವೇಳೆಯಲ್ಲಿ
ಪಕ್ಷ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ. ಸಚಿವ ಪಾರ್ಥ ಚಟರ್ಜಿ ಹಾಗೂ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ವಿಧಾನಸಭಾಧ್ಯಕ್ಷ ಬಿಮ್ ಬಂಡೋಪಾಧ್ಯಾಯ ಅವರಿಗೆ ಚಟ್ಟೋಪಾಧ್ಯಾಯ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯ ವಿಧಾನಸಭೆಗೆ ತೆರಳುವ ಮುನ್ನ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಪಕ್ಷದ ನಿರ್ಧಾರಕ್ಕೆ ಸಂತೋಷದಿಂದ
ವಿಧೇಯನಾಗಿರುತ್ತೇನೆ. ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನನ್ನ ನಿರ್ಧಾರವಾಗಿದ್ದು, ಭವಾನಿಪುರ ಕ್ಷೇತ್ರದ ಶಾಸಕ ಸ್ಥಾನಕ್ಕೆ
ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.
ಶೋಭಾನ್ ದೇವ್ ಚಟ್ಟೋಪಾದ್ಯಾಯ ಸ್ವಯಂ ಪ್ರೇರಿತರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾವುದೇ ಬೆದರಿಕೆ
ಅಥವಾ ಒತ್ತಡವಿಲ್ಲದೆ ಸ್ವಯಂ ಪ್ರೇರಿತರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರು ನಿರ್ಧಾರ ಕೈಗೊಂಡಿರುವುದನ್ನು
ತಿಳಿದ ಬಳಿಕ ರಾಜೀನಾಮೆ ಪತ್ರವನ್ನು ಅಂಗೀಕರಿಸಿರುವುದಾಗಿ ಸ್ಪೀಕರ್ ತಿಳಿಸಿದ್ದಾರೆ.
ಕೋವಿಡ್-19 ಕಾರಣದಿಂದ ಟಿಎಂಸಿ ಮುಖಂಡ ಕಜಾಲ್ ಸಿನ್ಹಾ ಅವರು ನಿಧನದ ಹಿನ್ನೆಲೆಯಲ್ಲಿ ನಡೆಯಲಿರುವ ಖಾರ್ದಾ ಕ್ಷೇತ್ರದ ಮರು ಚುನಾವಣೆಯಲ್ಲಿ ಶೋಭಾನ್ ದೇವ್ ಚಟ್ಟೋಪಾದ್ಯಾಯ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಕೆಲವರು ಹೇಳುತ್ತಿದ್ದರೆ, ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡುವ ಸಾಧ್ಯತೆಯಿರುವುದಾಗಿ ಮತ್ತೆ ಕೆಲವರು ಹೇಳುತ್ತಿದ್ದಾರೆ.
Follow us on Social media