ಬೆಂಗಳೂರು: ಸ್ಥಳೀಯ ನಾಯಕರು ಜವಾಬ್ದಾರಿ ತೆಗೆದುಕೊಳ್ಳಬೇಕೆ ಹೊರತು ನಾಯಕರನ್ನು ನಿರ್ಲಕ್ಷ್ಯ ಮಾಡಿದರೆ ಪಕ್ಷ ಉದ್ಧಾರವಾಗಲ್ಲ. ಸಿದ್ಧಾಂತ ಹಳಿ ತಪ್ಪಿದರೆ ಪಕ್ಷ ಸರ್ವನಾಶ ಖಂಡಿತ. ನಮ್ಮ ವರಿಷ್ಠರಿಗೆ ನಾವು ಬೆಲೆ ಕೊಡಬೇಕು. ನಮ್ಮ ಕ್ಷೇತ್ರಗಳಲ್ಲಿ ನಾವು ಪಕ್ಷವನ್ನು ಬಲಿಷ್ಠಗೊಳಿಸಬೇಕು. ಬೇರೆಯವರ ಮೇಲೆ ಜವಾಬ್ದಾರಿ ಹಾಕಿ ತಾವು ತಪ್ಪಿಸಿಕೊಳ್ಳಬಾರದು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಚುನಾವಣಾ ಸೋಲು ಹಾಗೂ ಸಂಘಟನೆಯಲ್ಲಿ ವೈಫಲ್ಯ ಕುರಿತು ಪಕ್ಷದ ನಾಯಕರಿಗೆ ಖಾರವಾಗಿಯೇ ಕ್ಲಾಸ್ ತೆಗೆದುಕೊಂಡರು.
ಸ್ಥಳೀಯ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಓರ್ವ ಕಾರ್ಪೋರೇಟರಗಳನ್ನು ಆರಿಸಿ ಕಳುಹಿಸುವುದಿಲ್ಲ. ತಾವು ಸರಿಯಾಗಿ ಜವಾಬ್ದಾರಿ ನಿಭಾಯಿಸದೆ ಅಭ್ಯರ್ಥಿ ಸೋತರೆ ರಾಹುಲ್ ಗಾಂಧಿ, ಸೋನಿ ಯಾ ಗಾಂಧಿ ಕಾರಣವೆನ್ನುತ್ತಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವವರು ನೀವೇ. ಇಂತಹವರಿಗೆ ಟಿಕೆಟ್ ಬೇಕು ಎಂದು ಸ್ಥಳೀಯ ನಾಯಕರು ಟಿಕೆಟ್ ಕೊಡಿಸುತ್ತಾರೆ. ಸೋತಾಗ ಪಕ್ಷದ ಹಿರಿಯ ನಾಯಕರ ಮೇಲೆ ತಪ್ಪು ಹೊರಿಸುತ್ತಾರೆ. ರಾಜ್ಯದಲ್ಲಿ ರಾಹುಲ್ ಗಾಂಧಿ ನಾಯಕರಾಗಿದ್ದಾರೆಯೇ ಎಂದು ಖಾರವಾಗಿಯೇ ಸ್ಥಳೀಯ ನಾಯಕರನ್ನು ಮಲ್ಲಿಕಾರ್ಜುನ್ ಖರ್ಗೆ ತರಾಟೆ ತೆಗೆದುಕೊಂಡರು.
ಚುನಾವಣೆಗಳು ಹಾಗೂ ಪಕ್ಷದ ಸಂಘಟನೆ ಬಗ್ಗೆ ಸ್ಥಳೀಯ ನಾಯಕರು ಜವಾಬ್ದಾರಿ ತೆಗೆದುಕೊಳ್ಳಬೇಕು. ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರನ್ನು ನಿರ್ಲಕ್ಷ್ಯ ಮಾಡಿದರೆ ಪಕ್ಷ ಉದ್ದಾರವಾಗುವುದಿಲ್ಲ. ಪಕ್ಷದ ಸಿದ್ದಾಂತ ನಾಶವಾದರೆ ಪಕ್ಷವೂ ನಾಶವಾಗುತ್ತದೆ ನಾವೂ ಸಹ ನಾಶವಾಗುತ್ತೇವೆ. ನಮ್ಮ ಪಕ್ಷದ ವರಿಷ್ಠರಿಗೆ ಗೌರವ, ಬೆಲೆ ಕೊಡಿ, ನಮ್ಮ ನಮ್ಮಲ್ಲೇ ಇರುವ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಟ್ಟಾಗಿ ಪಕ್ಷ ಸಂಘಟಿಸುವ ಮೂಲಕ ನಾಯಕರಿಗೆ ಶಕ್ತಿ ತುಂಬಬೇಕು. ಅವರ ಹೋರಾಟಕ್ಕೆ ನಾವು ಬೆಂಬಲ ನೀಡಬೇಕು. ಕುಂತಲ್ಲಿಯೇ ಕಾರುಬಾರು ಮಾಡಿದರೆ ಪಕ್ಷ ಸಂಘಟನೆ ಕಷ್ಟಸಾಧ್ಯ. ಫೀಲ್ಡಿಗೆ ಇಳಿದು ಹೋರಾಟ ಮಾಡಿ ಅಧಿಕಾರಕ್ಕೆ ಬನ್ನಿ ಎಂದು ಅವರು ಕಾರ್ಯಕರ್ತರಿಗೆ, ಮುಖಂಡರಿಗೆ ಕರೆ ನೀಡಿದರು.
ಇಂದಿರಾ ಗಾಂಧಿ ಅವರು ಬಡವರ ಪರ ಕಾರ್ಯಕ್ರಮ ನೀಡಿದರು. ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿದರು. ಭೂಸುಧಾರಣೆ ಕಾಯ್ದೆ ಜಾರಿಗೆ ತಂದು ಉಳುವವರಿಗೆ ಭೂಮಿ ನೀಡಿದರು. 10 ಹಾಗೂ 20 ಅಂಶಗಳ ಕಾರ್ಯಕ್ರ ಮ ಜಾರಿಗೆ ತರುವ ಮೂಲಕ ಬಡವರಿಗೆ ಯೋಜನೆಯ ಲಾಭವನ್ನು ನೀಡಿದರು. 20 ಅಂಶದ ಕಾರ್ಯಕ್ರಮ ದೇಶದ ಬಹುತೇಕ ಎಲ್ಲರಿಗೂ ನೆರವಾಗಿದೆ. ಅದರಲ್ಲೂ ದಕ್ಷಿಣ ಭಾರತಕ್ಕೆ ಹೆಚ್ಚಿಗೆ ಅನುಕೂಲವಾಗಿದೆ. ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣವನ್ನ ತ್ಯಾಗ ಮಾಡಿದರು. ಆದರೆ ಅವರ ತ್ಯಾಗವನ್ನ ನೆನೆಪಿಸಿಕೊಳ್ಳುತ್ತಿಲ್ಲ. ಬದಲಾಗಿ ಗಾಂಧಿ ಕುಟುಂಬಕ್ಕೆ ಕಳಂಕ ಹಚ್ಚುವ ಕೆಲಸವನ್ನು ಬಿಜೆಪಿ, ಆರ್ ಎಸ್ ಎಸ್ ನವರು ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜೀವ್ ಗಾಂಧಿಯವರು ಕೂಡ ದೇಶದ ಐಕ್ಯತೆಗಾಗಿ ದುಡಿದವರು. ಇಂದು ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಗಳಿವೆ, ಅದಕ್ಕೆ ಕಾರಣ ರಾಜೀವ್ ಅವರ ದೂರದೃಷ್ಠಿ. ಆಗ ಟೆಲಿಪೋನ್ ಕ್ರಾಂತಿ ಬಗ್ಗೆ ಬಿಜೆಪಿಯವರು ವಿರೋಧಿಸಿದ್ದರು. ಕಂಪ್ಯೂಟರ ಕ್ಷೇತ್ರದಲ್ಲಿ ದೇಶ ಹೆಸರು ಮಾಡಿದೆ. ಬೆಂಗಳೂರು ಐಟಿ ಹಬ್ ಆಗಿ ಗುರ್ತಿಸಿಕೊಂಡಿದೆ. ಇದಕ್ಕೆಲ್ಲ ಕಾರಣ ನೆಹರು ಕುಟುಂಬದ ತ್ಯಾಗ ಕಾರಣ. ಬಿಜೆಪಿ ಇಂದು ಆರ್ ಎಸ್ ಎಸ್ ಬಿಜೆಪಿಯಾಗಿದೆ. ಅಭ್ಯರ್ಥಿಯ ನೇರ ಆಯ್ಕೆ ಬಿಜೆಪಿಗಿಲ್ಲ ಆರ್ ಎಸ್ ಎಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದೆ. ಬಿಜೆಪಿಯದ್ದು ಏನೇನೂ ಇಲ್ಲದಂತಾಗಿದೆ. ಅವರು ಬಿಜೆಪಿ ಪಾರ್ಟಿ ಅನ್ನೋದನ್ನ ಮುಂದಿನ ದಿನಗಳಲ್ಲಿ ತೆಗೆದು ಆರ್ ಎಸ್ಎಸ್ ಪಕ್ಷ ಎಂದು ಬದಲಾಯಿಸಬಹುದು ಎಂದು ಬಿಜೆಪಿ ನಾಯಕರ ನಡೆಯನ್ನು ಟೀಕಿಸಿದರು.
ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಬಿಜೆಪಿ ಅಮಿತ್ ಶಾ, ಮೋದಿಯಿಂದ ನಾವು ಪಾಠ ಕಲಿಯಬೇಕಿಲ್ಲ. ಸುಳ್ಳು ಹೇಳಿಕೊಂಡೇ ಅಧಿಕಾರಕ್ಕೆ ಬಂದಿದ್ದಾರೆ. ನಮ್ಮ ಪಕ್ಷ ಉತ್ತಮ ಕೆಲಸ ಮಾಡಿದೆ. ಆದರೆ ಜನರಿಗೆ, ಯುವಕರಿಗೆ ಅದು ಅರ್ಥವಾಗ್ತಿಲ್ಲ. ರಾಜ್ಯದಲ್ಲೂ ಜನ ಬಸವತತ್ವ ಮರೆತಿದ್ದಾರೆ. ಅಂಬೇಡ್ಕರ್ ಅವರ ತತ್ವವನ್ನೂ ಮರೆತಿದ್ದಾರೆ. ನಾರಾಯಣ ಗುರು, ಜ್ಯೋತಿ ಬಾಪುಲೆಯವರ ತತ್ವವನ್ನೂ ಮರೆತರು. ಬಿಜೆಪಿಯವರು ಡಿವೈಡ್ ಆಂಡ್ ರೂಲ್ ಮಾಡ್ತಿದ್ದಾರೆ. ನಾವು ಎಲ್ಲಾ ಜಾತಿಯ ಪರ ಇರುವವರು. ಸಾಮಾಜಿಕ ನ್ಯಾಯ ಸಿದ್ಧಾಂತಕ್ಕೆ ಬದ್ಧವಾಗಿರುವವರು .ಎಲ್ಲಾ ಸಮಾಜದ ಯುವಕರ ಪರವಾಗಿರುವವರ ಗಾಂಧಿ, ಅಂಬೇಡ್ಕರ್, ಬಸವ, ಪುಲೆಯವರ ತತ್ವದ ಪಕ್ಷ ಅದು. ಕಾಂಗ್ರೆಸ್ ಎಂಬುದನ್ನು ನಾವು ಇಂದಿನ ಯುವಕರಿಗೆ, ಜನರಿಗೆ ತಿಳಿಸಬೇಕಿದೆ ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಜಾತಿ ಓಲೈಕೆ ರಾಜಕಾರಣ ಮಾಡುತ್ತಿದೆ. ಸಮುದಾಯಕ್ಕೊಂದು ಪ್ರಾಧಿಕಾರ ಮಾಡ್ತಿದ್ದಾರೆ. ಪಿಂಜಾರ, ಕಟುಕರಿಗೂ ಒಂದೊಂದು ಪ್ರಾಧಿಕಾರ ಮಾಡಿ. ಲಿಂಗಾಯತ ಅಭಿವೃದ್ಧಿ ನಿಗಮ ಮಾಡಿದ್ದು ಬಸವ ಕಲ್ಯಾಣದ ಉಪಚುನಾವಣೆಗಾಗಿ ಮಾತ್ರವೇ ಆಗಿದೆ. ಇದೆಲ್ಲವನ್ನು ಆರ್ ಎಸ್ ಎಸ್ ಹಿನ್ನಲೆಯಾಗಿಟ್ಟುಕೊಂಡು ನಡೆಸುತ್ತಿದ್ದಾರೆ. ಅಂಬೇಡ್ಕರ್, ಬಸವಣ್ಣನವರ ಸಿದ್ಧಾಂತದವರಿಗೆ ಜಾಗವಿಲ್ಲ. ನಾರಾಯಣ್ ರಾವ್, ಪುಲೆಯವರ ನಿಷ್ಠರಿಗೆ ಅಲ್ಲಿ ಅವಕಾಶವಿಲ್ಲ. ಆರ್ ಎಸ್ ಎಸ್ ಸಿದ್ಧಾಂತದವರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶ ನೀಡುತ್ತಾರೆ ಎನ್ನುವ ಮೂಲಕ ಕೋಮು ವಾದಿಗಳಿಗೆ ಮಾತ್ರ ಬಿಜೆಪಿಯಲ್ಲಿ ಮಣೆ ಎಂದು ಪರೋಕ್ಷವಾಗಿ ಹೇಳಿದರು.