ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಏ.7 ರಂದು ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರಿಗೆ ಸರ್ಕಾರ ಎಸ್ಮಾ ಎಚ್ಚರಿಕೆ ನೀಡಿದೆ.
ಆರನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ, ಸಾರಿಗೆ ನೌಕರರೊಂದಿಗೆ ಮತ್ತೆ ಮಾತುಕತೆಯ ಪ್ರಶ್ನೆಯೂ ಇಲ್ಲ, ಮುಷ್ಕರಕ್ಕೆ ಮುಂದಾದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ,ಎಸ್ಮಾ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಷ್ಕರಕ್ಕೆ ಮುಂದಾಗಿರುವ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಸಾರಿಗೆ ಇಲಾಖಾಧಿಕಾರಿಗಳು ಹಾಗೂ ನಾಲ್ಕು ಸಾರಿಗೆ ನಿಗಮದ ವ್ಯವಸ್ಥಾಪಕರ ಜೊತೆ ಸಭೆ ನಡೆಸಿದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕೋವಿಡ್ ಪರಿಸ್ಥಿತಿಯಲ್ಲಿ ಮುಷ್ಕರ ನಡೆಸದಂತೆ ಮನವಿ ಮಾಡಿದ್ದೇವೆ. 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಸಾಧ್ಯವಿಲ್ಲವಾದರೂ ಶೇ.8ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಸಿದ್ಧವಿದೆ. ಪ್ರಸಕ್ತ ಉಪಚುನಾವಣೆಯಿರುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವೇತನ ಹೆಚ್ಚಳದ ಘೋಷಣೆ ಸಾಧ್ಯವಿಲ್ಲ. ಪ್ರತಿನಿತ್ಯ 4 ಕೋಟಿ ನಷ್ಟ ಆಗುತ್ತಿದೆ ಆಗಿದ್ದರೂ ಸಂಬಂಳ ನೀಡಿದ್ದೇವೆ, ಶೇ.8 ರಷ್ಟು ಹೈಕ್ ಮಾಡಲು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಒಂದುವೇಳೆ ಚುನಾವಣಾ ಆಯೋಗ ಅನುಮತಿ ನೀಡಿದರೆ ಘೋಷಣೆ ಮಾಡುತ್ತೇವೆ ಎಂದರು.
ಸಾರಿಗೆ ನೌಕರರು ಮುಷ್ಕರ ನಡೆಸಿದರೆ ಅದರ ನಿರ್ವಹಣೆ ಮಾಡಲು ಸಾರಿಗೆ ಇಲಾಖೆ ಸಿದ್ದವಾಗಿದೆ. ಮುಷ್ಕರ ಮಾಡಿದರೆ ಪರ್ಯಾಯ ವ್ಯವಸ್ಥೆಗೂ ಚಿಂತನೆ ನಡೆಸಿದ್ದು, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಸೇರಿದಂತೆ ಎಲ್ಲಾವನ್ನೂ ಪರವಾನಗಿ ಕೇಳದೆ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತೇವೆ, ರೂಟ್, ಪರ್ಮಿಟ್ ಇಲ್ಲದೆ ಸಂಚಾರಕ್ಕೆ ಅನುವುಮಾಡಿಕೊಡಲಾಗುತ್ತದೆ. ಅಲ್ಲದೇ ಎಸ್ಮಾ ಜಾರಿ ಬಗ್ಗೆ ಚರ್ಚಿಸಿದ್ದು ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು.ಯಾವುದೇ ಕಾರಣಕ್ಕೂ ಮತ್ತೆ ಮುಷ್ಕರ ನಡೆಸುವವರ ಜೊತೆ ಸಂಧಾನವಿಲ್ಲ. ಎಸ್ಮಾ ಜಾರಿ ಮಾಡೋ ಬಗ್ಗೆ ಚರ್ಚೆ ನಡೆಸಿದ್ದೇವೆ, ಕಾನೂನು ಚೌಕಟ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಯಾವುದೇ ಕಾರಣಕ್ಕೂ ಮತ್ತೆ ಸಂಧಾನ ಇಲ್ಲ. ಆದರೂ ಮುಷ್ಕರ ನಡೆಸಿದಲ್ಲಿ ಎನ್ಡಿಎಂಎ, ಎಸ್ಮಾ ಸೇರಿದಂತೆ ಯಾವುದಾದರೂ ಆಗಬಹುದು. ಒಟ್ಟಿನಲ್ಲಿ ಕಠಿಣ ಕ್ರಮ ಖಚಿತ ಎಂದರು.
ನಾಳಿನ ಮುಷ್ಕರದ ವೇಳೆ ಗುಂಪು ಗುಂಪು ಸೇರುವಂತಿಲ್ಲ. ಕೋವಿಡ್ ನಿಯಮ ಉಲ್ಲಂಘಿಸುವಂತಿಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವಂತಿಲ್ಲ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಗೆ ದರ ನಿಗದಿ ಮಾಡುತ್ತೇವೆ ಆ ದರದಂತೆ ಹಣ ವಸೂಲಿ ಮಾಡಬೇಕು. ರಜೆ, ಹಬ್ಬ ಇರುವುದರಿಂದ ವಿಶೇಷ ರೈಲು ವ್ಯವಸ್ಥೆ ಮಾಡಲು ರೈಲ್ವೇ ಇಲಾಖೆ ಜೊತೆ ಮಾತನಾಡುವುದಾಗಿ ರವಿಕುಮಾರ್ ಸ್ಪಷ್ಟಪಡಿಸಿದರು.
Follow us on Social media