ಇತ್ತೀಚೆಗೆ ನಿಧನರಾದ ಪತಿ ಚಿರಂಜೀವಿ ಸರ್ಜಾರನ್ನು ನೆನೆದು ಭಾವನಾತ್ಮಕ ಪತ್ರ ಬರೆದಿದ್ದ ಮೇಘನಾ ರಾಜ್, ಇದೀಗ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಕಳೆದ ಕೆಲವು ದಿನ ನನ್ನ ಜೀವನದ ಅತಿ ಕಠಿಣ ಹಾಗೂ ಆಘಾತಕರ. ಕಲ್ಪನೆಗೂ ಮೀರಿ ಅದ್ಭುತವಾಗಿದ್ದ ನನ್ನ ಸುಂದರ ಲೋಕ ಅಲ್ಲೋಲ ಕಲ್ಲೋಲ ಆದಾಗ, ನನಗಾಗಿ ಏನೂ ಇಲ್ಲವೆಂದುಕೊಂಡಾಗ ಕಗ್ಗತ್ತಲೆಯಲ್ಲಿ ಆಶಾದೀಪದಂತೆ ಕಂಡಿದ್ದು ನನ್ನ ಕುಟುಂಬ, ಸ್ನೇಹಿತರು, ಚಿತ್ರರಂಗದ ಸಹಪಾಠಿಗಳು, ಎಲ್ಲರಿಗಿಂತ ಹೆಚ್ಚಾಗಿ ಅಭಿಮಾನಿಗಳು ತೋರಿದ ಪ್ರೀತಿ, ವಾತ್ಸಲ್ಯ, ಮಮತೆ” ಎಂದು ಮೇಘನಾ ಬರೆದುಕೊಂಡಿದ್ದಾರೆ.
“ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಲು ಒಂದು ಜನುಮ ಸಾಲದು. ಆ ನಿಮ್ಮ ಪ್ರೀತಿಯೇ ಆಸರೆ, ರಕ್ಷಾಕವಚ ಎಂದಿರುವ ಮೇಘನಾ, ‘ನಾನು ಅತ್ತಾಗ ನೀವೂ ನನ್ನೊಂದಿಗೆ ಕಣ್ಣೀರು ಹಾಕಿದ್ದೀರಿ. ನನ್ನ ನೋವನ್ನು ನೀವೂ ಉಂಡಿದ್ದೀರಿ. ನನ್ನಷ್ಟೇ ಚಿರು ಅವರನ್ನು ಪ್ರೀತಿಸಿದ್ದೀರಿ. ನಿಮ್ಮ ಆ ಪ್ರೀತಿಗೆ ನಾನು ಚಿರಋಣಿ” ಎಂದಿದ್ದಾರೆ.
“ಅಭಿಮಾನಿಗಳು ತೋರಿದ ಪ್ರೀತಿ, ಚಿತ್ರರಂಗ ನೀಡಿದ ಬೆಂಬಲ . . . ಇವೆಲ್ಲ ಚಿರು ಸಂಪಾದಿಸಿದ ಪ್ರೀತಿಯ ರಾಶಿಯ ಗುರುತು. ನಿಮ್ಮ ಅಭಿಮಾನ ಗೆದ್ದ ಅವರಿಗಿಂತ ಸಿರಿವಂತ ಇನ್ಯಾರೂ ಇಲ್ಲ. ಇದ್ದಷ್ಟು ದಿನ ರಾಜನಂತೆ ಇದ್ದ ಚಿರುವನ್ನು ಮಹಾರಾಜನಂತೆ ಕಳುಹಿಸಿಕೊಟ್ಟ ನಿಮಗೆಲ್ಲ ನಮಸ್ಕಾರ. ಆ ಮಹಾರಾಜ ನನ್ನ ಮಡಿಲಿಗೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ತಿರುಗಿ ಬರುವನು” ಎಂದು ಮೇಘನಾ ರಾಜ್ ಪತ್ರದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
Follow us on Social media