ಬೆಂಗಳೂರು : ಮುಂಗಾರು ಬಿತ್ತನೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಅದರಲ್ಲೂ ಅನುಮೋದಿತ ( certified) ಬೀಜಗಳ ಮೇಲೆ ಅವಲಂಬಿತವಾಗಿರುವವರು , ನಕಲಿ ಬೀಜಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಸೂಚನೆಯ ಮೇರೆಗೆ 24 ರಂದು ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಕೆಲವು ಗೋಡೌನ್ ಗಳ ಮೇಲೆ ಅವರ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ಮೆಕ್ಕೇಜೋಳ ಬೀಜದ ದಾಸ್ತಾನುಗಳನ್ನು ವಶಪಡಿಸಿಕೊಂಡಿದ್ದು, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನಕಲಿ ಬೀಜ ಮಾರಾಟಗಾರರ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರು ಎಚ್ಚರಿಕೆಯಿಂದಿರಬೇಕು ಎಂದಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಶೀಥಲೀಕರಣ ಘಟಕಗಳಿಂದ 7026 ಕ್ವಿಂಟಾಲ್ ಮತ್ತು ಧಾರವಾಡ ಜಿಲ್ಲೆಯಲ್ಲಿ 270.60 ಕ್ವಿಂಟಾಲ್, ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ 70 ಕ್ವಿಂಟಾಲ್ ಸೇರಿ ಒಟ್ಟು 7366 ಕ್ವಿಂಟಾಲ್ ಬೀಜಗಳ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೊತ್ತ ರೂ.10 ಕೋಟಿ ರೂ ಆಗಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಗಾತ್ರದ ನಕಲಿ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃಷಿ ಸಚಿವರ ಶ್ರಮ ಮತ್ತು ರೈತಪರ ಕಾಳಜಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ನಕಲಿ ಬೀಜ ದಾಸ್ತಾನುದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೃಷಿ ಅಧಿಕಾರಿಗಳಿಗೆ ಅವರು ಸೂಚಿಸಿರುವದಾಗಿ ತಿಳಿಸಿದ್ದಾರೆ.