ನವದೆಹಲಿ: ಟೀಂ ಇಂಡಿಯಾ ಪ್ರೀಮಿಯರ್ ಸ್ಪಿನ್ನರ್ ಯಜ್ವೇಂದ್ರ ಚಹಲ್ ಶನಿವಾರ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಕೊರೊನಾ ವೈರಸ್ ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿಯೇ ತಮ್ಮ ಸಮಯವನ್ನು ಕಳೆಯುತ್ತಿರುವ ಚಹಲ್, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಹಲ್ ಅವರು ತಮ್ಮ ಭಾವಿ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. “ನಮ್ಮ ಕುಟುಂಬದೊಂದಿಗೆ ನಾವು ಹೇಳುತ್ತೇವೆ “ಹೌದು” #rokaceremony,” ಎಂದು ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯನ್ನು ಹಂಚಿಕೊಂಡಿರುವ ಹಲವು ಫೋಟೊಗಳಿಗೆ ಶೀರ್ಷಿಕೆಯನ್ನು ಕೊಟ್ಟಿದ್ದಾರೆ.
ನಿಶ್ಚಿತಾರ್ಥಕ್ಕೂ ಮೊದಲು ಚಹಲ್, ತಮ್ಮ ಜತೆಗಾರ್ತಿ ಧನಶ್ರೀ ವರ್ಮಾ ಅವರೊಂದಿಗೆ ಕೆಲವು ಜೂಮ್ ಕಾರ್ಯಾಗಾರಗಳಲ್ಲಿ ಕಾಣಿಸಿಕೊಂಡಿದ್ದರು. ಧನಶ್ರೀ ವರ್ಮಾ ಅವರು ವೈದ್ಯ ಮತ್ತು ನೃತ್ಯ ಸಂಯೋಜಕರಾಗಿರುವುದಲ್ಲದೆ, ಯೂಟ್ಯೂಬ್ನಲ್ಲಿ ಸಕ್ರಿಯರಾಗಿದ್ದಾರೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಪ್ರೊಫೈಲ್ ನೋಡುವ ಮೂಲಕ ತಿಳಿದುಬಂದಿದೆ.
ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾನ್ಕೋವಿಚ್ ದಂಪತಿಗೆ ಇತ್ತೀಚೆಗಷ್ಟೇ ಗಂಡು ಮಗು ಜನಿಸಿತ್ತು. ಇದಾದ ಕೆಲ ದಿನಗಳಲ್ಲಿ ಮುಂಬೈ ಇಂಡಿಯನ್ಸ್ ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಹಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗುವ ಮೂಲಕ ಯಜ್ವೇಂದ್ರ ಚಹಲ್ ಕೋವಿಡ್-19 ವಿರಾಮವನ್ನು ಎಂಜಾಯ್ ಮಾಡುತ್ತಿದ್ದಾರೆ. ಸೆಪ್ಟೆಂಬರ್ 19ಕ್ಕೆ ಯುಎಇಯಲ್ಲಿ ಆರಂಭವಾಗಲಿರುವ ಐಪಿಎಲ್ 13 ನೇ ಆವೃತ್ತಿಗೆ ಚಹಲ್ ಪೂರ್ವ ತಯಾರಿಯಲ್ಲಿದ್ದಾರೆ. ಶ್ರೀಮಂತ ಫ್ರಾಂಚೈಸಿ ಲೀಗ್ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
Follow us on Social media