ಬೆಂಗಳೂರು: ರಾಜ್ಯದಲ್ಲಿ ಮತ್ತೆ ಹೊಸದಾಗಿ 22 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ ಮತ್ತಿಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ವಿಜಯಪುರದಲ್ಲಿ ಬೆಳಗ್ಗೆ ಒಬ್ಬರು ಮೃತಪಟ್ಟಿದ್ದು ಇದೀಗ ದಾವಣಗೆರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ದಾವಣಗೆರೆಯಲ್ಲಿ ಮತ್ತೆ ಹೊಸದಾಗಿ 11 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಜನರಿಗೆ ಆತಂಕ ಮೂಡಿಸಿದೆ.
556 ಹಾಗೂ 581 ನೇ ರೋಗಿಯ ಸಂಪರ್ಕಕ್ಕೆ ಬಂದಿದ್ದ 5 ವರ್ಷದ ಬಾಲಕ ಸೇರಿ 30, 25, 51, 48, 27, ವರ್ಷದ ವ್ಯಕ್ತಿಗಳು, 50, 52, 36, 15, 19 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಇದರ ಬೆನ್ನಲ್ಲೇ ವಿಜಯಪುರದ 62 ವರ್ಷದ ಮಹಿಳೆ ಹಾಗೂ ದಾವಣಗೆರೆಯ 50 ವರ್ಷದ ಮಹಿಳೆ ಸೊಂಕಿನಿಂದ ಮೃತಪಟ್ಟಿದ್ದಾರೆ.
ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 673ಕ್ಕೇರಿಕೆಯಾಗಿದೆ. 30 ಜನರು ಮೃತಪಟ್ಟಿದ್ದು, 331 ಜನರು ಗುಣಮುಖರಾಗಿದ್ದಾರೆ.
ಜೊತೆಗೆ, ಬೆಂಗಳೂರು ನಗರದ ಹೋಟೆಲ್ ಒಂದರ ಹೌಸ್ ಕೀಪಿಂಗ್ ಸಿಬ್ಬಂದಿ ಸೇರಿ ಮೂರು, ಬಾಗಲಕೋಟೆಯಲ್ಲಿ ಎರಡು, ಬಳ್ಳಾರಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಭಟ್ಕಳ, ಹಾವೇರಿಯ ಸವಣೂರು ಹಾಗೂ ಧಾರವಾಡದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Follow us on Social media