ದಾವಣಗೆರೆ : ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಶವ ನಾಲ್ಕು ದಿನಗಳ ಬಳಿಕ ಇದೀಗ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇವರ ಸಹೋದರ ಎಂ.ಪಿ. ರಮೇಶ್ ಅವರ ಹಿರಿಯ ಪುತ್ರ ಎಂ. ಆರ್. ಚಂದ್ರಶೇಖರ್ ಕಾಣೆಯಾಗಿದ್ದರು, ಅವರ ಕಾರು ಕಾಲುವೆ ಬಳಿ ಪತ್ತೆಯಾಗಿತ್ತು.
ಇವರು ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ಕಾರಿನಲ್ಲಿ ತೆರಳಿದ್ದ ಚಂದ್ರಶೇಖರ್ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು.
ನಂತರ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು.
ಆದರೆ ಇದೀಗ ಆಶ್ಚರ್ಯವೆಂಬಂತೆ ಹೊನ್ನಾಳಿ ಎಚ್ ಕಡದಕಟ್ಟೆ ಮಧ್ಯದ ಕಾಲುವೆಗೆ ಕಾರು ಬಿದ್ದಿದೆ. ವಿಷಯ ತಿಳಿದು ಓಡೋಡಿ ಬಂದ ರೇಣುಕಾಚಾರ್ಯ ಶವ ಕಂಡು ಸ್ಥಳದಲ್ಲೇ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಘಟನಾ ಸ್ಥಳಕ್ಕೆ ದಾವಣಗೆರೆ ಎಸ್‌ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿದ್ದು, ಚಂದ್ರಶೇಖರ್ ಮೃತದೇಹವನ್ನು ಪೊಲೀಸರು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದಾರೆ.
ಚಂದ್ರಶೇಖರ್ ಕಾರು ಕಾಲುವೆಗೆ ಹೇಗೆ ಬಿತ್ತು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow us on Social media