ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಕಲ್ಮಂಜ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಕಳ್ಳರು ಮನೆಯೊಂದಕ್ಕೆ ನುಗ್ಗಿ ನಗದು ಸೇರಿದಂತೆ 13 ಲಕ್ಷ ರೂಪಾಯಿ ಮೌಲ್ಯದ ಅಮೂಲ್ಯ ವಸ್ತುಗಳನ್ನು ದೋಚಿದ್ದಾರೆ.
ಅಡಿಕೆ ವ್ಯಾಪಾರಿಯೊಬ್ಬರ ಮನೆಯಲ್ಲಿ ಈ ಕಳ್ಳತನವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳ್ಳತನವಾದ ಬೆಲೆಬಾಳುವ ವಸ್ತುಗಳ ಪೈಕಿ 40 ಸೋವೆರಿನ್ ಗೋಲ್ಡ್ ಕಾಯಿನ್ಸ್, ಒಂದು ಕೆಜಿ ಬೆಳ್ಳಿ ಮತ್ತು 25 ಸಾವಿರ ರೂ. ನಗದು ಸೇರಿದೆ.
ಅಡಿಕೆ ವ್ಯಾಪಾರಿ ಅಚ್ಯುತ್ ಭಟ್ ಅವರ ಮನೆಯಲ್ಲಿ ಈ ದರೋಡೆ ನಡೆದಿದೆ. ನಾಯಿಗಳು ಬೊಗಳುವುದನ್ನು ಕೇಳಿದ ಮನೆಯವರು ಬಾಗಿಲು ತೆರೆಯುತ್ತಿದ್ದಂತೆ, ಮುಖವಾಡ ಧರಿಸಿದ್ದ ಕಳ್ಳರು, ಮನೆಯೊಳಗೆ ನುಗ್ಗಿ, ಅಡ್ಡಗಟ್ಟಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಕೊಳ್ಳೆ ಹೊಡೆಯುವ ಮುನ್ನ ಎಲ್ಲರನ್ನೂ ಕಟ್ಟಿಹಾಕಲಾಗಿದೆ ಎಂದಿರುವ ಪೊಲೀಸರು,ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
Follow us on Social media