ಚಿಕ್ಕೋಡಿ/ಬೆಳಗಾವಿ: ಡೆಡ್ಲಿ ಕೊರೊನಾ ಮಧ್ಯೆಯೂ ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಶಾಸಕನ ಆಪ್ತನೊಬ್ಬ ಡಿಜೆ ಹಾಕಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಆಪ್ತ ಹಾಗೂ ಬಗರ ಹುಕುಂ ಸಮಿತಿ ಸದಸ್ಯ ನರಸು ತುಳಸಿಗೇರಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಸಂಜೆ 7 ನಂತರ ನಿಷೇಧಾಜ್ಞೆ ಇದ್ದರೂ ತಡರಾತ್ರಿವರೆಗೂ ಲಾಕ್‍ಡೌನ್ ನಿಯಮಗಳನ್ನ ಗಾಳಿಗೆ ತೂರಿ ಕೊರೊನಾ ನಡುವೆಯೂ ಡಿಜೆ ಹಾಕಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಮಾಸ್ಕ್ ಧರಿಸದೇ, ಸಾಮಾಜಿಕ ಅಂತವಿಲ್ಲದೇ ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಗುಂಪು ಗುಂಪಾಗಿ ಪಾರ್ಟಿ ಮಾಡಿದ್ದಾರೆ. ಶಾಸಕರ ಆಪ್ತ ಅನ್ನುವ ಕಾರಣಕ್ಕೆ ಪೊಲೀಸರು ಇತನನ್ನ ಪ್ರಶ್ನೆ ಮಾಡಿಲ್ಲ. ಪೊಲೀಸ್ ಠಾಣೆಯಿಂದ 5 ಕಿಲೋಮೀಟರ್ ದೂರದಲ್ಲಿರುವ ನಿಲಜಿ ಗ್ರಾಮದಲ್ಲಿ ಶಾಸಕನ ಆಪ್ತನ ಬಗ್ಗೆ ಪೊಲೀಸರ ಗಮನಕ್ಕೂ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಜನರಿಗೆ ಕೊರೊನಾ ಮಹಾಮಾರಿಯಿಂದ ರಕ್ಷಣೆ ಮಾಡಬೇಕಿರುವ ಶಾಸಕರು ತಮ್ಮ ಆಪ್ತರು ಹೀಗೆಲ್ಲ ದರ್ಬಾರ ಮಾಡುತ್ತಿದ್ದರೂ ಸುಮ್ಮನಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
Follow us on Social media