ಬೆಂಗಳೂರು : ಡೋಲೋ 650 ಮಾತ್ರೆ ತಯಾರಿಕಾ ಮತ್ತು ಮಾರಾಟ ಘಟಕಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಧಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ 40ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ.
ಕೊರೊನಾ ವ್ಯಾಪಕವಾಗಿದ್ದ ಸಂದರ್ಭದಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ್ದ ಕಂಪೆನಿಯು ಅದಕ್ಕೆ ಸರಿಯಾಗಿ ಆದಾಯ ತೆರಿಗೆ ಪಾವತಿಸದ ಕಾರಣ ಈ ಧಾಳಿ ನಡೆಸಲಾಗಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಲ್ಯಾಬ್ಸ್ ಕೇಂದ್ರ ಕಚೇರಿ, ತಮಿಳುನಾಡು, ಗೋವಾ, ಪಂಜಾಬ್, ಮುಂಬೈ, ದೆಹಲಿ, ಸಿಕ್ಕಿಂ ಸೇರಿ ದೇಶದ 40 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಸಂಸ್ಥೆಯ ಸಿಎಂಡಿ ದಿಲೀಪ್ ಸುರಾನಾ, ನಿರ್ದೇಶಕ ಆನಂದ್ ಸುರಾನ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ದೇಶದಲ್ಲಿ ಕೊರೊನಾ ವ್ಯಾಪಕವಾಗಿದ್ದ ಸಂದರ್ಭದಲ್ಲಿ 350 ಕೋಟಿ ಡೋಲೋ ಮಾತ್ರೆ ಮಾರಾಟವಾಗಿ ಮೈಕ್ರೋ ಲ್ಯಾಬ್ಸ್ ಕಂಪನಿಗೆ 570 ಕೋಟಿ ರೂ. ಆದಾಯ ಹರಿದು ಬಂದಿತ್ತು. ಆದರೆ ಈ ಆದಾಯಕ್ಕೆ ಸರಿಯಾಗಿ ಆದಾಯ ತೆರಿಗೆಯನ್ನು ಕಂಪೆನಿ ಪಾವತಿಸಿರಲಿಲ್ಲ. ಇದೇ ಕಾರಣಕ್ಕಾಗಿ ಐಟಿ ಅಧಿಕಾರಿಗಳು ಕಂಪೆನಿಯ ವಿವಿಧ ಘಟಕ ಹಾಗೂ ಪ್ರಮುಖರ ನಿವಾಸಕ್ಕೆ ಧಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ.
Follow us on Social media