ಮುಡಿಪು : ಕೊರೊನಾ ಪರಿಸ್ಥಿತಿ ಗಂಭೀರವಾಗಿದೆ. ಯಾವುದನ್ನೂ ಲಘುವಾಗಿ ತೆಗೆದುಕೊಳ್ಳುವುದು ಸರಿಯಲ್ಲ. ಜಾಗೃತಿ ಇದ್ದಷ್ಟು ಎಲ್ಲರಿಗೂ ಒಳ್ಳೆಯದು. ಯಾರೂ ಕೂಡ ತಮ್ಮಲ್ಲಿ ಅಥವಾ ನೆರೆಹೊರೆಯವರಲ್ಲಿ ಜ್ವರ ಕುರಿತ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆಶಾ ಕಾರ್ಯಕರ್ತೆಯರ ಗಮನಕ್ಕೆ ತರುವ ಕೆಲಸ ಮಾಡಿ ಎಂದು ಶಾಸಕ ಯು.ಟಿ. ಖಾದರ್ ಕಿವಿ ಮಾತು ಹೇಳಿದ್ದಾರೆ.
ಮುಡಿಪು ಭಾಗದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ವಿವಿಧ ಪಂಚಾಯಿತಿ ಜನಪ್ರತಿನಿಧಿಗಳ ಜೊತೆಗೆ ಮಂಗಳವಾರ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸುವ ಜನಜಾಗೃತಿಯನ್ನು ಕಾರ್ಯಪಡೆ ಮಾಡಬೇಕಿದೆ. ಪ್ರತಿ ಪಂಚಾಯಿತಿನ ಜನಪ್ರತಿನಿಧಿಗಳು ಕಾರ್ಯಪಡೆಗಳಾಗಿ ಕಾರ್ಯಾಚರಿಸಿ ಹೆಚ್ಚಿನ ಜನಜಾಗೃತಿಯನ್ನು ಮೂಡಿಸುತ್ತಿರಬೇಕಿದೆ ಎಂದರು.ಮುಡಿಪು ಭಾಗದಲ್ಲಿ ವರ್ತಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಈ ನಿಟ್ಟಿನಲ್ಲಿ ವರ್ತಕರು ಜವಾಬ್ದಾರಿ ನಿಭಾಯಿಸಬೇಕಿದೆ. ನರಿಂಗಾನ, ಪೊಟ್ಟೊಳಿಕೆ, ಚಂದಳಿಕೆ ಕುಡಿಯುವ ನೀರಿನ ಸಮಸ್ಯೆ ಕುರಿತು ನರಿಂಗಾನ ಪಿಡಿಓ ವಿವರಿಸಿದರು. ಟ್ಯಾಂಕರ್ ಟೆಂಡರ್ ಆಗಿದೆ. ಜಿಪಿಎಸ್ ಅಳವಡಿಸಿರುವ ವಾಹನ ಶೀಘ್ರವೇ ನೀರು ಹಾಕಲಿದೆ ಎಂದು ಶಾಸಕರು ಅಧಿಕಾರಿಯಿಂದ ಮಾಹಿತಿ ಪಡೆದರು.ಪಜೀರು ಗ್ರಾ.ಪಂ ನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸ್ವಂತ ನಿಧಿಯಿಂದ ಬೋರ್ ವೆಲ್ ಹಾಕುವ ವ್ಯವಸ್ಥೆ ಮಾಡಿದ್ದರೂ, ಬೋರ್ ವೆಲ್ ಯಂತ್ರದ ಮಾಲೀಕರು ಕಾಮಗಾರಿ ನಡೆಸಲು ಒಪ್ಪುತ್ತಿಲ್ಲ ಎಂದು ಪಿಡಿಓ ಹೇಳಿದರು. ಬೋರ್ ಹಾಕಲು ಯಾವುದೇ ಅಡೆತಡೆಗಳಿಲ್ಲ. ಕೂಡಲೇ ಬೋರ್ ಅಳವಡಿಸುವಂತೆ ಸೂಚಿಸುವುದಾಗಿ ತಿಳಿಸಿದರು. ಎಪಿಎಲ್ ಕಾರ್ಡು ಪಡೆಯಲು ಆಧಾರ್ ಕಾರ್ಡು ಇದ್ದಲ್ಲಿ ಸಾಕು, ತಮ್ಮ ಸರಕಾರದ ಅವಧಿಯಲ್ಲಿ ಬಹುತೇಕ ಕಾನೂನುಗಳನ್ನು ಸಡಿಲಗೊಳಿಸಲಾಗಿದೆ. ಬಿಪಿಎಲ್ ಕಾರ್ಡು ಪಡೆಯಲು ಕೆಲ ಷರತ್ತುಗಳ ದಾಖಲೆಗಳು ಬೇಕಿದೆ ಎಂದರು.
Follow us on Social media