ಮೈಸೂರು: ಲಾಕ್’ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪಿಯುಸಿ ಇಂಗ್ಲೀಷ್ ಭಾಷೆ ಪರೀಕ್ಷೆಯನ್ನು ಜೂ.18ಕ್ಕೆ ನಡೆಸಿ, ಜು.8ರ ಆಸುಪಾಸಿನಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಇದೇ ವೇಳೆ ಎಸ್ಎಸ್ಎಲ್’ಸಿ ಫಲಿತಾಂಶವನ್ನೂ ಕೂಡ ಜುಲೈ ತಿಂಗಳ ಅಂತ್ಯದ ವೇಳೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಡಿಡಿಪಿಐಗಳ ನಡೆಸಿದ ಅವರು, ಎಸ್ಎಸ್ಎಲ್’ಸಿ ಪರೀಕ್ಷೆ ನಡೆಸಬಾರದು ಎಂದು ಕೆಲವರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದ್ದು, ಜೂ.25ರಿಂದ ಜು.4ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 24ರಿಂದ 18ಕ್ಕೆ ಇಳಿಸಲಾಗಿದೆ ಎಂದೂ ಕೂಡ ಇದೇ ವೇಳೆ ತಿಳಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆಯ ಆದೇಶಗಳನ್ನು ಉಲ್ಲಂಘಿಸಿ ಶುಲ್ಕ ಹೆಚ್ಚಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳಿಗೆ ಆನ್ಲೈನ್ ತರಬೇತಿ ನೀಡುವ ಕುರಿತು ಈಗಾಗಲೇ ನಿಮ್ಹಾನ್ಸ್ ನಿರ್ದೇಶಕರಿಗೆ ಪತ್ರ ಬರೆದು ಸಲಹೆ ಕೇಳಲಾಗಿದೆ. ಆದರೆ, ನಿರ್ದೇಶಕರು 6 ವರ್ಷಕ್ಕಿಂತಲೂ ಕಡಿಮೆ ಇರುವ ಮಕ್ಕಳಿಗೆ ಇಂತಹ ತರಬೇತಿ ನೀಡುವ ಪರವಾಗಿಲ್ಲ ಎಂದಿದ್ದಾರೆ.
ಇದೇ ವೇಳೆ ಗ್ರಾಮೀಣ ಭಾಗದ ಮಕ್ಕಳು ಆನ್’ಲೈನ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವೇ ಎಂಬುದರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
Follow us on Social media