ಮುಂಬೈ: ಗಾಲ್ವಾನ್ ಸಂಘರ್ಷ ಮತ್ತು ಭಾರತೀಯ ಸೈನಿಕರ ಹತ್ಯೆ ವಿಚಾರವಾಗಿ ಭಾರತ ಮತ್ತು ಚೀನಾ ನಡುವಿನ ಸಂಬಂಧ ತೀವ್ರ ಹಳಸಿರುವಂತೆಯೇ ಇತ್ತ ಮಹಾರಾಷ್ಟ್ರ ಸರ್ಕಾರ ಚೀನಾ ಸಂಸ್ಥೆಗಳೊಂದಿಗೆ ಹೂಡಿಕೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸುದ್ದಿಗೆ ಗ್ರಾಸವಾಗಿದೆ.
ಮೂಲಗಳ ಪ್ರಕಾರ ಮಹಾರಾಷ್ಟ್ರ ಸರ್ಕಾರ ಚೀನಾ ಮೂಲದ ಇತ್ತೀಚೆಗೆ ವಿಶ್ವದ 12 ಸಂಸ್ಛೆಗಳೊಂದಿಗೆ ಎಒಯುಗೆ ಸಹಿ ಹಾಕಿದ್ದು. ಈ ಪೈಕಿ ಚೀನಾ ಮೂಲದ ಮೂರು ಸಂಸ್ಥೆಗಳು ಕೂಡ ಸೇರಿವೆ. ಚೀನಾದ ಈ ಮೂರು ಸಂಸ್ಥೆಗಳು ಮಹಾರಾಷ್ಟ್ರದಲ್ಲಿ ಸುಮಾರು 5 ಸಾವಿರ ಕೋಟಿ ರೂ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಹಾಕಿವೆ ಎನ್ನಲಾಗಿದೆ. ಹೆಂಗ್ಲಿ ಎಂಜಿನಿಯರಿಂಗ್, ಫೋಟಾನ್ ಮತ್ತು ಗ್ರೇಟ್ ವಾಲ್ ಮೋಟಾರ್ಸ್, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್ಸ್ ಜೆ.ವಿ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಪೈಕಿ ಹೆಂಗ್ಲಿ ಎಂಜಿನಿಯರಿಂಗ್ ಸಂಸ್ಥೆ ಸುಮಾರು 250 ಕೋಟಿ ರೂಗಳನ್ನು ಹೂಡಿಕೆ ಮಾಡುತ್ತಿದ್ದು, ಪಿಎಂಐ ಸಂಸ್ಥೆ ಆಟೋ ಕ್ಷೇತ್ರದಲ್ಲಿ ಒಂದು ಸಾವಿರ ಕೋಟಿ ರೂ ಹೂಡಿಕೆ ಮಾಡಲಿದೆ. ಇನ್ನು ಎಸ್‌ಯುವಿ ಮಾದರಿಯ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಚೀನಾದ ಗ್ರೇಟ್‌ವಾಲ್ ಮೋಟಾರ್ಸ್ (GWM) ಮಂಗಳವಾರ ಮಹಾರಾಷ್ಟ್ರ ಸರ್ಕಾರದೊಂದಿಗೆ ದೊಡ್ಡ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ ಮಹಾರಾಷ್ಟ್ರದ ತಲೇಗಾಂವ್‌ನಲ್ಲಿ ಎಸ್‌ಯುವಿ ತಯಾರಿಕ ಘಟಕ ತಲೆ ಎತ್ತಲಿದೆ. ಇದು ಸುಮಾರು 3,000 ಜನರಿಗೆ ಉದ್ಯೋಗವಕಾಶಗಳನ್ನು ಒದಗಿಸುತ್ತದೆ ಎನ್ನಲಾಗಿದೆ. ಇದು 3,770 ಕೋಟಿ ರೂ ಯೋಜನೆ ಇದಾಗಿದೆ.
GWM ನ ಭಾರತ ವಲಯದ ಅಧ್ಯಕ್ಷ ಜೇಮ್ಸ್ ಪಾರ್ಕಿಂಗ್, ವ್ಯವಸ್ಥಾಪಕ ನಿರ್ದೇಶಕ ಜೇಮ್ಸ್ ಯಾಂಗ್, ಭಾರತದಲ್ಲಿನ ಚೀನಾದ ರಾಯಭಾರಿ ಸನ್ ವೀಡಾಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ತಲೇಗಾಂವ್ ಘಟಕದಲ್ಲಿ ಈಗಾಗಲೇ ಲಾಜಿಸ್ಟಿಕ್ಸ್ ವಿತರಣಾ ಕೇಂದ್ರ, ತರಬೇತಿ ಕೇಂದ್ರ, ಯೋಜನಾ ನಿರ್ವಹಣಾ ಕಟ್ಟಡ, ಆಡಳಿತ ಕಚೇರಿ ಕಟ್ಟಡ ಮತ್ತು ಸಾರ್ವಜನಿಕ ಸೌಲಭ್ಯ ಕೇಂದ್ರದಂತಹ ಸೌಲಭ್ಯಗಳಿವೆ. ಕಳೆದ ವರ್ಷ ಹೆಕ್ಟರ್ ಎಸ್‌ಯುವಿ ಮೂಲಕ ಪಾದಾರ್ಪಣೆ ಮಾಡಿದ ಎಸ್‌ಐಸಿ ಒಡೆತನದ ಎಂಜಿ ಮೋಟಾರ್ ನಂತರ, ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಎರಡನೇ ಪ್ರಮುಖ ಚೀನಾದ ಆಟೋ ಕಂಪನಿ GWM ಆಗಿದೆ.
ಕೇವಲ ಚೀನಾ ಮಾತ್ರವಲ್ಲದೇ ಅಮೆರಿಕ, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದ ಸಂಸ್ಥೆಗಳೂ ಮಹಾರಾಷ್ಟ್ರದಲ್ಲಿ ಆಟೋಮೊಬೈಲ್, ಲಾಜಿಸ್ಟಿಕ್ಸ್, ಬ್ಯಾಂಕಿಂಗ್, ಎಂಜಿನಿಯರಿಂಗ್ ಮತ್ತು ಮೊಬೈಲ್ ಉತ್ಪಾದನಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿವೆ.
Follow us on Social media