ಮಂಗಳೂರು: ಕರಾವಳಿ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಎರಡು ದಿನ ವಾಹನ ಸಂಚಾರ ನಿಷೇಧಿಸಿ ದ.ಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.
ಮಂಗಳೂರು-ವಿಲ್ಲುಪುರಂ ಹೆದ್ದಾರಿ 73ರಲ್ಲಿ ಕಿ.ಮೀ 76ರಿಂದ 86.20 ವರೆಗೆ ಚಾರ್ಮಾಡಿ ಘಾಟ್ ಭಾಗದಲ್ಲಿ ಕಳೆದೆರಡು ದಿನಗಳಿಂದ ಆಗುತ್ತಿರುವ ಅಧಿಕ ಪ್ರಮಾಣದ ಗಾಳಿ ಮಳೆಯಿಂದಾಗಿ ಭಾರಿ ಗಾತ್ರದ ಮರಗಳೊಂದಿಗೆ ಗುಡ್ಡ ಕುಸಿತ ಉಂಟಾಗಿದೆ. ಗುಡ್ಡ ಕುಸಿತ ಜಾಗದಲ್ಲಿ ಪದೇ ಪದೇ ವಾಹನ ದಟ್ಟಣೆ ಉಂಟಾಗಿ ಕುಸಿತದ ಮಣ್ಣು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎರಡು ದಿನ ವಾಹನ ಸಂಚಾರ ನಿಷೇಧಿಸುವಂತೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಡಿಸಿಯವರನ್ನು ವಿನಂತಿಸಿದ್ದರು. ಅದನ್ನು ಪರಿಗಣಿಸಿ ಜಿಲ್ಲಾಧಿಕಾರಿ ಈ ಆದೇಶ ಮಾಡಿದ್ದಾರೆ.
ಎರಡೂ ದಿನ ಎಲ್ಲಾ ರೀತಿಯ ವಾಹನಗಳ ಓಡಾಟವನ್ನೂ ನಿಷೇಧಿಸಲಾಗಿದೆ. ಆ.7ರಂದು ಬೆಳಗ್ಗೆ 6ರಿಂದ, 8ರಂದು ಮಧ್ಯರಾತ್ರಿ 12ರ ವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.
ಬದಲಿ ಮಾರ್ಗ:
ಎರಡೂ ದಿನ ವಾಹನಗಳು ಉಜಿರೆ-ಧರ್ಮಸ್ಥಳ-ಕೊಕ್ಕಡ-ಗುಂಡ್ಯ-ಶಿರಾಡಿ(ಎನ್ಎಚ್ 75) ಹಾಗೂ ಮೂಡಿಗೆರೆ ಹ್ಯಾಂಡ್ಪೋಸ್ಟ್-ಜನ್ನಾಪುರ-ಆನೆಮಹಲ್-ಶಿರಾಡಿ-ಗುಂಡ್ಯ(ಎನ್ಎಚ್ 75) ಮೂಲಕ ಸಂಚರಿಸಬಹುದು ಎಂದು ತಿಳಿಸಲಾಗಿದೆ.