ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗೂಗಲ್ ಪೇ ಆ್ಯಪ್ ಬಳಕೆದಾರರ ಮೇಲೂ ಸೈಬರ್ ಖದೀಮರು ಕಣ್ಣು ಹಾಕಿದ್ದಾರೆ.
ನಗರದ ಗವಿಪುರಂ ನಿವಾಸಿ ಹರೀಶ್ ಎಂಬುವವರಿಗೆ ಗೂಗಲ್ ಪೇ ಸಮಸ್ಯೆಯಾಗಿತ್ತು. ಹೀಗಾಗಿ ಅವರು ಗೂಗಲ್ ಪೇ ನಲ್ಲಿರುವ ಕಸ್ಟಮರ್ ಕೇರ್ ಸಂಖ್ಯೆಯನ್ನು ಸರ್ಚ್ ಮಾಡಿ ಸಿಕ್ಕ ನಂಬರ್ 9901771222ಕ್ಕೆ ಕರೆ ಮಾಡಿದ್ದರು. ಆದರೆ, ಅವರಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ತಕ್ಷಣವೇ 06291766339 ಸಂಖ್ಯೆಯಿಂದ ಅಪರಿಚಿತ ವ್ಯಕ್ತಿಯೋರ್ವನಿಂದ ಹರೀಶ್ ಅವರಿಗೆ ಕರೆ ಬಂದಿದ್ದು, ನಿಮಗೆ ಗೂಗಲ್ ಪೇ ಸಮಸ್ಯೆ ಆಗಿದೆ ತಾನೇ ? ನಾವು ಕೇಳುವ ಡಿಟೇಲ್ಸ್ ಬಗ್ಗೆ ಸ್ಪಂದಿಸಿದರೇ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದ್ದಾರೆ.
ನಂತರ ಹರೀಶ್, ಅಪರಿಚಿತ ವ್ಯಕ್ತಿ ಕೇಳಿದ ಡೆಬಿಟ್ ಕಾರ್ಡ್ ನಂಬರ್, ಪಿನ್ ಕೋಡ್, ಒಟಿಪಿ ಸಂಖ್ಯೆಗಳನ್ನು ನೀಡಿದ್ದರು. ಬಳಿಕ ವ್ಯಕ್ತಿ ನಿಮ್ಮ ಗೂಗಲ್ ಪೇ ಸರಿಯಾಗಿದೆ. ಈಗ ಓಪನ್ ಮಾಡಿ ಎಂದು ಹೇಳಿ ಕರೆ ಕಟ್ ಮಾಡಿದ್ದರು. ಕಾಲ್ ಕಟ್ ಆಗಿದ ನಂತರ ನೋಡುತ್ತಿದ್ದಂತೆ ಅಕೌಂಟ್ನಲ್ಲಿರುವ 24,500 ರೂ. ಖಾಲಿಯಾಗಿದೆ.
ನಂತರ ಗಾಬರಿಗೊಂಡ ಹರೀಶ್, ಕರೆ ಬಂದಿದ್ದ ಸಂಖ್ಯೆಗೆ ವಾಪಸ್ಸು ಕರೆ ಮಾಡಿದ್ದರು. ಆದರೆ, ಆ ಸಂಖ್ಯೆ ಸ್ವಿಚ್ಡ್ ಆಪ್ ಆಗಿತ್ತು. ಶೀಘ್ರವೇ ಎಚ್ಚೆತ್ತುಕೊಂಡ ಹರೀಶ್ ಅವರು ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣದ ಜಾಡು ಹಿಡಿದ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
Follow us on Social media