ನವದೆಹಲಿ: ದೇಶದ ವಾರ್ಷಿಕ ಸ್ವಚ್ಛ ಸರ್ವೇಕ್ಷಣಾ ಸರ್ವೆ 2020ರ ಫಲಿತಾಂಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೆಳಗ್ಗೆ ಪ್ರಕಟಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಮಂಗಳವಾರ ಪ್ರಕಟಿಸಿದೆ.
ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ನಗರಗಳು ಮತ್ತು ರಾಜ್ಯಗಳಿಗೆ ‘ಸ್ವಚ್ಛ ಮಹೋತ್ಸವ’ ಕಾರ್ಯಕ್ರಮದಲ್ಲಿ ಒಟ್ಟು 129 ಪ್ರಶಸ್ತಿಗಳನ್ನು ವಿತರಸಿಲಾಗುವುದು.
ನಂತರ ಸ್ವಚ್ಛ ಭಾರತ ಯೋಜನೆ-ನಗರ (ಎಸ್‌ಬಿಎಂ-ಯು) ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಈ ಪೈಕಿ ಕೆಲ ಆಯ್ದ ಫಲಾನುಭವಗಳು, ಸ್ವಚ್ಛಾಗ್ರಹಿಗಳು ಮತ್ತು ಸಫಾಯಿ ಕರ್ಮಚಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ಇದು ಒಟ್ಟು 4,242 ನಗರಗಳು, 62 ಕಂಟೋನ್ಮೆಂಟ್ ಮಂಡಳಿಗಳು ಮತ್ತು 92 ಗಂಗಾ ತಟದ ಪಟ್ಟಣಗಳ ಸರ್ವೆ ನಡೆಸಿದ ವಿಶ್ವದ ಅತಿದೊಡ್ಡ ಸ್ವಚ್ಛತಾ ಸಮೀಕ್ಷೆಯಾಗಿದ್ದು, 1.87 ಕೋಟಿ ನಾಗರಿಕರು ಭಾಗವಹಿಸಿದ್ದಾರೆ.
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸುತ್ತಿರುವ ಈಈ ಕಾರ್ಯಕ್ರಮ ಆಯೋಜಿಸಿದೆ.
ಭಾರತದಲ್ಲಿ ಸ್ವಚ್ಛ ನಗರಗಳ ನಡುವೆ ಆರೋಗ್ಯಕರ ಸ್ಪರ್ಧೆ ಉಂಟುಮಾಡುವ ಜೊತೆಗೆ ಯೋಜನೆಯಲ್ಲಿ ದೊಡ್ಡ ಪ್ರಮಾಣದ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರವು ಸ್ವಚ್ಛ ಸರ್ವೇಕ್ಷಣಾ ಯೋಜನೆಯನ್ನು ಪರಿಚಯಿಸಿತು.
ಸಚಿವಾಲಯ 2016ರ ಜನವರಿಯಲ್ಲಿ 73 ಪ್ರಮುಖ ನಗರಗಳನ್ನು ರೇಟಿಂಗ್ ಮಾಡಲು ಸ್ವಚ್ಛ ಸರ್ವೇಕ್ಷಣಾ 2016 ಸಮೀಕ್ಷೆ ನಡೆಸಿತ್ತು, ನಂತರ ಪ್ರತಿ ವರ್ಷ ಇದು ಮುಂದುವರಿಯಿತು. 2019ರಲ್ಲಿ 4,237 ನಗರಗಳನ್ನು ಈ ಯೋಜನೆಗೆ ಸೇರಿಸಲಾಗಿದೆ. ಇದು 28 ದಿನಗಳ ದಾಖಲೆಯ ಸಮಯದಲ್ಲಿ ಪೂರ್ಣಗೊಂಡ ಮೊದಲ ಸಂಪೂರ್ಣ ಡಿಜಿಟಲ್ ಸಮೀಕ್ಷೆಯಾಗಿದೆ.
ಸಮೀಕ್ಷೆಯ ಮೊದಲ ಆವೃತ್ತಿಯಲ್ಲಿ ಮೈಸೂರು ಭಾರತದ ಸ್ವಚ್ಛ ನಗರ ಪ್ರಶಸ್ತಿಯನ್ನು ಗೆದ್ದಿದ್ದರೆ, ಇಂದೋರ್ ಸತತ ಮೂರು ವರ್ಷಗಳ ಕಾಲ (2017, 2018, 2019) ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಕೋವಿಡ್ ಹಿನ್ನೆಲೆಯಲ್ಲಿ 2020ರ ಫಲಿತಾಂಶ ವಿಳಂಭವಾಗಿ ಪ್ರಕಟವಾಗಲಿದೆ.
28 ದಿನಗಳಲ್ಲಿ ಪೂರ್ಣಗೊಂಡ ಸ್ವಚ್ಛ ಸರ್ವೇಕ್ಷಣಾ 2020ನಲ್ಲಿ ಸ್ವಚ್ಛತಾ ಆ್ಯಪ್‌ನಲ್ಲಿ ನೋಂದಣಿಯಾಗಿರುವ 1.7 ಕೋಟಿ ನಾಗರಿಕರು, ಸಾಮಾಜಿಕ ಮಾಧ್ಯಮದಲ್ಲಿ 11 ಕೋಟಿಗೂ ಹೆಚ್ಚು ಅಭಿಪ್ರಾಯಗಳು, 5.5 ಲಕ್ಷಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕರು ಮತ್ತು 84,000 ಕ್ಕೂ ಹೆಚ್ಚು ಅನೌಪಚಾರಿಕ ಪೌರಕಾರ್ಮಿಕರನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಸಚಿವಾಲಯದ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
Follow us on Social media